ಸೋಮವಾರಪೇಟೆ, ಮೇ 17: ಇಲ್ಲಿಗೆ ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಗದ್ದೆ ಮತ್ತು ತೋಟಗಳಿಗೆ ಧಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಷ್ಟಪಡಿಸಿದ್ದು, ಬೆಳೆಗಾರರು ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.

ಯಡವನಾಡು ಗ್ರಾಮದಲ್ಲಿ ಕಳೆದ ಐದಾರು ದಿನಗಳಿಂದ ಐದು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಬುಧವಾರ ತಡರಾತ್ರಿ ಕಾಡಾನೆಗಳು ಗ್ರಾಮದ ಯು.ಪಿ.ರಾಜು, ನಂದಕುಮಾರ್, ಮುತ್ತಪ್ಪ, ರಾಧ ಮೇದಪ್ಪ ಮತ್ತು ಸುರೇಶ್ ಎಂಬವರ ಗದ್ದೆ ಮತ್ತು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಮರಗೆಣಸು, ಬಾಳೆ, ಕೇನೆ ಗೆಡ್ಡೆ ಮತ್ತು ಕಾಫಿ ಗಿಡಗಳನ್ನು ತುಳಿದು ನಷ್ಟಪಡಿಸಿದೆ.

ಗ್ರಾಮಸ್ಥರು ಹುದುಗೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪುಕಾರು ನೀಡಿದ್ದಾರೆ. ಗ್ರಾಮದಲ್ಲಿ ಪ್ರತೀ ವರ್ಷ ಇದೇ ಸಮಸ್ಯೆ ಮುಂದುವರೆಯುತ್ತಿದ್ದು ಕಾಡಾನೆಗಳ ಹಾವಳಿಯನ್ನು ತಡೆಯಲು ಶಾಶ್ವತ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ. ಈಗಾಗಲೇ ಬೆಳೆಗಾರರು ಕಾಫಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಉಪಬೆಳೆಯಾಗಿ ಬಾಳೆ, ಗೆಣಸು ಇನ್ನಿತರ ತರಕಾರಿ ಬೆಳೆಗಳನ್ನು ಅವಲಂಬಿಸಿ ಕೃಷಿ ಮಾಡಲಾಗಿತ್ತು. ಆದರೆ ಫಸಲು ತೆಗೆಯುವ ಸಂದರ್ಭ ಕಾಡು ಪ್ರಾಣಿಗಳ ಧಾಳಿಗೆ ತುತ್ತಾಗುತ್ತಿದೆ. ಆರ್ಥಿಕ ಪರಿಸ್ಥಿತಿಯು ಬಿಗಡಾಯಿಸಿದೆ. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಮೂಲಕ ರೈತರ ಹಿತ ಕಾಪಾಡಲು ಮುಂದಾಗ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.