ಮಡಿಕೇರಿ, ಮೇ 17: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಮಡ್ಲಂಡ ಸೇರಿದಂತೆ ಕೀತಿಯಂಡ, ಅಮ್ಮಾಟಂಡ, ಮಂಡುವಂಡ, ಕುಟ್ಟಂಡ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಟಾಸ್‍ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಡ್ಲಂಡ ತಂಡ 4 ಓವರ್‍ನಲ್ಲಿ ಒಂದು ವಿಕೆಟ್‍ಗೆ 49 ರನ್ ಗಳಿಸಿದರೆ, ಮುಕ್ಕಾಟಿರ (ಬೇತ್ರಿ) ತಂಡ 5 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿ 16 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮಡ್ಲಂಡ ದಿಲನ್ 18 ರನ್ ಗಳಿಸಿದರೆ, ದರ್ಶನ್ 4 ವಿಕೆಟ್ ಗಳಿಸಿ ಗಮನ ಸೆಳೆದರು. 18 ರನ್ ಗಳಿಸಿದ ಮುಕ್ಕಾಟಿರ ಉತ್ತಮ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಕುಟ್ಟಂಡ ತಂಡ 5 ಓವರ್‍ನಲ್ಲಿ 1 ವಿಕೆಟ್‍ಗೆ ಭರ್ಜರಿ 98 ರನ್ ಗಳಿಸಿದರೆ, ಅಪ್ಪಾರಂಡ ತಂಡ 5 ವಿಕೆಟ್‍ಗೆ 42 ರನ್ ಮಾತ್ರ ಗಳಿಸಿ 56 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಕುಟ್ಟಂಡ ರಂಜನ್ 53 ರನ್ ಗಳಿಸಿದರೆ, 23 ರನ್ ಗಳಿಸಿದ ಅಪ್ಪಾರಂಡ ವಿಜು ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಮಂಡುವಂಡ ತಂಡ 3 ವಿಕೆಟ್‍ಗೆ 58 ರನ್ ಗಳಿಸಿದರೆ, ಬಲ್ಲಂಡ ತಂಡ 2 ವಿಕೆಟ್‍ಗೆ 37 ರನ್ ಗಳಿಸಿ 22 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮಂಡುವಂಡ ದೀಕ್ಷಿತ್ 27 ರನ್ ಗಳಿಸಿದರೆ, 19 ರನ್ ಗಳಿಸಿದ ಬಲ್ಲಂಡ ಪೂವಯ್ಯ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಅರಮಣಮಾಡ ತಂಡ 4 ವಿಕೆಟ್‍ಗೆ 38 ರನ್ ಗಳಿಸಿದರೆ, ಅಮ್ಮಾಟಂಡ ತಂಡ 1 ವಿಕೆಟ್ ನಷ್ಟದಲ್ಲಿ 40 ರನ್ ಗಳಿಸಿ, ಗುರಿ ಸಾಧಿಸಿತು. 14 ರನ್ ಗಳಿಸಿದ ಅರಮಣಮಾಡ ತಿಮ್ಮಯ್ಯ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಕೀತಿಯಂಡ ತಂಡ 7 ವಿಕೆಟ್‍ಗೆ 41 ರನ್ ಗಳಿಸಿದರೆ, ಪೊನ್ನಚಂಡ ತಂಡ 4 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿ, 5 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕೀತಿಯಂಡ ದೇವಯ್ಯ 23 ರನ್ ಗಳಿಸಿದರೆ, 22 ರನ್ ಗಳಿಸಿದ ಪೊನ್ನಚಂಡ ಕಾಳಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು.