ನಾಪೋಕ್ಲು, ಮೇ 17 : ಭಾರದ ದೇಶದ ಪರ ಒಲಂಪಿಕ್ಸ್ ನಂತಹ ಮಹಾನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಾಕಿಪಟುಗಳು ಇಲ್ಲಿ ಪರಸ್ಪರ ಎದುರಾಳಿಗಳು. ಎರಡೂ ತಂಡದಲ್ಲಿ ಹಲವಷ್ಟು ಖ್ಯಾತನಾಮ ಆಟಗಾರರು ಮುಖಾಮುಖಿಯಾಗಿದ್ದರು. ಮತ್ತೊಂದು ತಂಡದಲ್ಲಿ ವಿಶ್ವಕಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆಟಗಾರ ಸೇರಿದಂತೆ ನಾಲ್ಕು ಪಂದ್ಯಗಳ ಸ್ಪರ್ಧೆಯಲ್ಲಿನ ಎಂಟು ಕುಟುಂಬ ತಂಡಗಳಲ್ಲೂ ಪ್ರತಿಷ್ಠಿತ ಆಟಗಾರರ ಪಾಲ್ಗೊಳ್ಳುವಿಕೆಯಿಂದಾಗಿ ಹಾಕಿಯ ರೋಚಕತೆ ಅಭಿಮಾನಿಗಳಲ್ಲಿ ಮುದ ನೀಡಿತು.ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಕ್ವಾರ್ಟರ್ ಫೈನಲ್ ಪಂದ್ಯಗಳು ರೋಮಾಂಚನ ಕಾರಿಯಾಗಿ ನಡೆಯಿತು.ಇಂದು ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಳೆದ ವರ್ಷ ರನ್ನರ್ಸ್ ಪ್ರಶಸ್ತಿಗೆ ಭಾಜನವಾಗಿರುವ ಪರದಂಡ ತಂಡ ಬೊವೇರಿಯಂಡ ತಂಡದ ವಿರುದ್ಧ ಸೆಣಸಿತ್ತು. ಸ್ಪೂರ್ತಿ ಯುತ ಆಟದ ಪ್ರದರ್ಶನ ನೀಡಿದ ಪರದಂಡ ಆಟಗಾರರು ಬೊವ್ವೇರಿಯಂಡ ವಿರುದ್ಧ 5-2 ಗೋಲಿನ ಅಂತರದಿಂದ ಜಯಗಳಿಸಿತು. ಪರದಂಡ ಪರ ಪ್ವಜ್ವಲ್ ಪೂವಣ್ಣ, ಕೀರ್ತನ್ ತಲಾ ಎರಡು ಗೋಲು ಬಾರಿಸಿದರೆ, ನಿತಿನ್ ಮತ್ತೊಂದು ಗೋಲು ದಾಖಲಿಸಿದರು. ಬೊವ್ವೇರಿಯಂಡÀ ಪರ ಮುತ್ತಣ್ಣ, ನಿತಿನ್ ಅಪ್ಪಯ್ಯ ಒಂದೊಂದು ಗೋಲು ಗಳಿಸಿದರು.

(ಮೊದಲ ಪುಟದಿಂದ) ಮಾಜಿ ಚಾಂಪಿಯನ್ ಅಂಜಪರವಂಡ ಹಾಗೂ ಈ ಹಿಂದೆ ರನ್ನರ್ಸ್ ಪ್ರಶಸ್ತಿಗಳಿಸಿರುವ ಚೆಪ್ಪುಡೀರ ತಂಡಗಳ ನಡುವಿನ ಎರಡನೇ ಪಂದ್ಯ ತೀವ್ರ ಸೆಣಸಾಟದಿಂದ ಕೂಡಿದ್ದು, ನೆರೆದಿದ್ದವರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಈ ಪಂದ್ಯದಲ್ಲಿ ಅಂಜಪರವಂಡ ಪರ ಮಾಜಿ ಒಲಂಪಿಯನ್ ಡಾ|| ಎ.ಬಿ. ಸುಬ್ಬಯ್ಯ ಹಾಗೂ ಚೆಪ್ಪುಡೀರ ಪರ ಮಾಜಿ ಒಲಂಪಿಯನ್ ಸಿ.ಎಸ್. ಪೂಣಚ್ಚ ಪರಸ್ಪರ ಎದುರಾಳಿಗಳಾಗಿ ಆಡಿದ್ದು ವಿಶೇಷವಾಗಿತ್ತು. ಫಲಿತಾಂಶಕ್ಕಾಗಿ ಶೂಟೌಟ್ ಹಂತ ಕಂಡ ಈ ಪಂದ್ಯದಲ್ಲಿ ಅಂಜಪರವಂಡ ತಂಡ 3-1 ಗೋಲಿನ ಅಂತರದಿಂದ ಜಯಗಳಿಸಿತು. ನಿಗದಿತ ಅವಧಿಯಲ್ಲಿ ಅಂಜಪರವಂಡ ಕಾರ್ಯಪ್ಪ ಹಾಗೂ ಚೆಪ್ಪುಡೀರ ಸೋಮಣ್ಣ ತಲಾ ಒಂದೊಂದು ಗೋಲುಗಳಿಸಿದರು. ಶೂಟೌಟ್‍ನಲ್ಲಿ ಅಂಜಪರವಂಡ ವಿಜಯ ಶಾಲಿಯಾಯಿತು. ಐದು ಬಾರಿಯ ಚಾಂಪಿಯನ್ ಪಳಂಗಂಡ ಹಾಗೂ ಮೂರು ಬಾರಿಯ ಚಾಂಪಿಯನ್ ಕೂತಂಡ ತಂಡಗಳ ನಡುವಿನ ಮೂರನೇ ಪಂದ್ಯವೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಮಾಜಿ ವಿಶ್ವಕಪ್ ಆಟಗಾರ ಕೂತಂಡ ಪೂಣಚ್ಚ ಮೈದಾನಕ್ಕೆ ಇಳಿದಿದ್ದರು. ಅಂತಿಮವಾಗಿ ಕೂತಂಡ ತಂಡ ಪಳಂಗಂಡ ತಂಡವನ್ನು 3-1 ಗೋಲಿನಿಂದ ಮಣಿಸಿತು. ಕೂತಂಡ ಪರ ಬೋಪಣ್ಣ, ಬೋಪಯ್ಯ, ಸಂತೋಷ್ ಹಾಗೂ ಪಳಂಗಂಡ ಪರ ಪೊನ್ನಪ್ಪ ಏಕೈಕ ಗೋಲು ಗಳಿಸಿದರು.

ಕಳೆದ ಬಾರಿಯ ಚಾಂಪಿಯನ್ ಚೇಂದಂಡ ಹಾಗೂ ಸೋಮೆಯಂಡ ತಂಡಗಳ ನಡುವೆ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೇಂದಂಡ ತಂಡಕ್ಕೆ ಸೋಮೆಯಂಡ ತೀವ್ರ ಸ್ಪರ್ಧೆಯೊಡ್ಡಿದರೂ ಜಯಗಳಿಸಲಾಗಲಿಲ್ಲ. ಚೇಂದಂಡ ತಂಡ 2-1 ಗೋಲಿನಿಂದ ಸೆಮಿಫೈನಲ್ ಪ್ರವೇಶಿಸಿತು. ಚೇಂದಂಡ ಪರ ತಮ್ಮಯ್ಯ ಎರಡು ಗೋಲು ಗಳಿಸಿದರೆ, ಸೋಮೆಯಂಡ ಸುಜು ಏಕೈಕ ಗೋಲು ಬಾರಿಸಿದರು. ಚೆಪ್ಪುಡೀರ ಕಾರ್ಯಪ್ಪ ಹಾಗೂ ಅಂಜಪರವಂಡ ಬೊಳ್ಳಮ್ಮ ವೀಕ್ಷಕ ವಿವರಣೆ ನೀಡಿದರು.