ಚೆಟ್ಟಳ್ಳಿ, ಮೇ 17: ಕೇರಳದ ಮೂಲದ ಕಂಪೆನಿಯೊಂದು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಘಟನೆ ನಡೆದಿದ್ದು, ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ.
ಕೆ.ಚೆಟ್ಟಳ್ಳಿಯ ಐಚೆಟ್ಟಿರ ಶಿವುಸುಬ್ಬಯ್ಯ ಕಳೆದ ಒಂದುವರೆ ವರ್ಷದಿಂದ ಶ್ರೀ ಪುದಿಯೋದಿ ಮಾರ್ಕೆಟಿಂಗ್ ಕಂಪನಿಯನ್ನು ಪ್ರಾರಂಭಿಸಿ ತಮ್ಮ ವೆಬ್ಸೈಟ್ನಲ್ಲಿ ಕೊಡಗಿನ ಗುಣಮಟ್ಟದ ಕಾಫಿ, ಕರಿಮೆಣಸನ್ನು ಮಾರಾಟ ಮಾಡುತ್ತಿದ್ದರು. ಹಲವರು ಆನ್ಲೈನ್ ಮುಖಾಂತ ಖರೀದಿಸಿದರೆ ಮತ್ತೆ ಕೆಲವರು ಫೋನಿನ ಮುಖಾಂತರ ಸಂಪರ್ಕಿಸಿ ಕಾಫಿ ಪುಡಿ ಹಾಗೂ ಕರಿಮೆಣಸನ್ನು ಖರೀದಿಸುತಿದ್ದರು. ಕೊಡಗಿನ ಕಾಫಿಯನ್ನು ಹಲವು ವಿಧದಲ್ಲಿ ತಯಾರಿಸುವದರಿಂದ ಉತ್ತಮ ಮಾರುಕಟ್ಟೆ ಹಾಗೂ ಬೇಡಿಕೆಯೂ ಇದೆ.
ಕಳೆದ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನ ಅರ್ಜುನ್ ಕದಂಬ ಎಂಬ ಮಧ್ಯವರ್ತಿ ಶಿವು ಸುಬ್ಬಯ್ಯ ಅವರಿಗೆ ಫೋನ್ ಮೂಲಕ ಸಂಪರ್ಕಿಸಿ ನಿಮ್ಮ ಗುಣ ಮಟ್ಟದ ಕರಿಮೆಣಸಿನ ಬಗ್ಗೆ ವೆಬ್ಸೈಟ್ನಲ್ಲಿ ನೋಡಿದ್ದೇನೆ. ಸ್ಯಾಂಪಲ್ ಕಳುಹಿಸಿಕೊಟ್ಟರೆ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡಿ ಹೆಚ್ಚಿನ ಪ್ರಮಾಣದ ಕರಿಮೆಣಸು ಬೇಕೆನ್ನುವ ಬೇಡಿಕೆ ಇಟ್ಟಿದ್ದಾನೆ. ಅದರಂತೆ ಸ್ಯಾಂಪಲ್ ಸಿಕ್ಕಿದೊಡನೆ ಅರ್ಜುನ್ 2ಸಾವಿರ ಕೆ.ಜಿ. ಬೇಡಿಕೆ ಇಟ್ಟಿದ್ದಾನೆ. ಕರಿಮೆಣಸನ್ನು ಕೇರಳದ ಕೊಯಮುತ್ತೂರಿನ ಶ್ರೀ ಮಹಾಲಕ್ಷ್ಮಿ ಟ್ರೇಡಿಂಗ್ ಕೊ. ಗೆ ತಲುಪಿಸಿದರೆ ಸ್ಥಳದಲೇ ಹಣ ನೀಡುವ ಭರವಸೆ ನೀಡಿದ್ದಾನೆ.
ಅದರಂತೆ ಶಿವು ಸುಬ್ಬಯ್ಯ ಅವರು ಕೊಯಮುತ್ತೂರಿಗೆ ಕರಿಮೆಣಸನ್ನು ವರ್ಗಾಯಿಸಲು ಆನ್ ಲೈನ್ ಮುಖಾಂತರ ಈವೇ ಬಿಲ್ಲನ್ನು ಪಡೆದು ಲಾರಿಯೊಂದರಲ್ಲಿ 2ಟನ್ ಕರಿಮೆಣಸನ್ನು ತುಂಬಿ ಕೊಯಮುತ್ತೂರಿನ ಶ್ರೀ ಮಹಾಲಕ್ಷ್ಮಿ ಟ್ರೇಡಿಂಗ್ ಕಂಪನಿಗೆ ನೀಡಿದ್ದಾರೆ. ಬಳಿಕ ಗುಣಮಟ್ಟ ಪರೀಕ್ಷಿಸಿ ಬಿಲ್ಲು ನೀಡುವಾಗ ಉತ್ತಮ ಗುಣಮಟ್ಟವಿದೆ ಎಂದು ಬರೆದು ಸಹಿಮಾಡಲಾಗಿದೆ. ರೂ. 1,73,000 ನಗದು ಮಾತ್ರ ಇದ್ದು ಉಳಿದ ರೂ. 9,81,750.00 ಹಣಕ್ಕೆ ಕೊಯಮುತ್ತೂರಿನ ರಾಮನಾಥಪುರಮ್ನ ಸಿಟಿ ಯೂನಿಯನ್ ಬ್ಯಾಂಕಿನ ಚೆಕ್ಕನ್ನು ನೀಡಿದ್ದು, ಪಡೆದ ಹಣದಲ್ಲಿ ವ್ಯಾಪಾರ ಮಾಡಿ ಕೊಟ್ಟ ಮಧ್ಯವರ್ತಿ ಅರ್ಜುನ್ ಕದಂಬ 75ಸಾವಿರ ಪಡೆದಿದ್ದಾನೆ.
ನಂತರದಲ್ಲಿ ಚೆಕ್ಕನ್ನು ಕಲೆಕ್ಷನಿಗೆ ಹಾಕಲು ಮುಂದಾದಾಗ ಕಂಪನಿಯ ಪ್ರೊಪ್ರೈಟರ್ ಸೆಂದಿಲ್ಲ್ ಕುಮಾರ್ ಚೆಕ್ಕನ್ನು ಕಲೆಕ್ಷನಿಗೆ ಹಾಕದಂತೆ ಒಂದೆರಡು ದಿನ ಸತಾಯಿಸಿದರು ಎನ್ನಲಾಗಿದ್ದು, ಮಾರನೇ ದಿನ ಕರಿಮೆಣಸು ವ್ಯಾಪಾರ ಮಾಡಿದ ಶಿವುಸುಬ್ಬಯ್ಯನಿಗೆ ಮಹಾಲಕ್ಷ್ಮಿ ಟ್ರೇಡಿಂಗ್ ಕಂಪನಿಯವರಿಂದ ಲೀಗಲ್ ನೋಟಿಸ್ ಬಂದಿದೆ. ಅದರಲ್ಲಿ ನಿಮ್ಮಿಂದ ಪಡೆದ ಕಾಳುಮೆಣಸಿನ ಗುಣಮಟ್ಟ ಸರಿ ಇಲ್ಲ. ಆದರಿಂದ ನಾವು ಉಳಿದ ಹಣ ನೀಡಲಾಗುವದಿಲ್ಲ ಈಗಾಗಲೇ ನೀಡಿದ 1,73,000.00 ಹಣ ಹಾಗೂ 9,81,750.00 ಚೆಕ್ಕನ್ನು ಹಿಂದಕ್ಕೆ ನೀಡಿದರೆ 2 ಟನ್ ಕರಿಮೆಣಸನ್ನು ಹಿಂದಕ್ಕೆ ನೀಡುದಾಗಿ ತಿಳಿಸಲಾಗಿತ್ತು.
ಆದರೆ ಶಿವು ಸುಬ್ಬಯ್ಯ ಅವರು ಮೊದಲು ಮಹಾಲಕ್ಷ್ಮಿ ಟ್ರೇಡಿಂಗ್ ಕಂಪನಿ ನೀಡಿದ ಚೆಕ್ಕನ್ನು ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕಿನ ಮುಖಾಂತರ ಕಲೆಕ್ಷನಿಗೆ ನೀಡಿದಾಗ ಕೆಲವು ದಿನಗಳ ನಂತರ ಹಣವಿಲ್ಲವೆಂದು ಚೆಕ್ಕು ಹಿಂದಿರುಗುತ್ತದೆ. ನಂತರದಲ್ಲಿ ಮಡಿಕೇರಿಯ ವಕೀಲರನ್ನು ಸಂಪರ್ಕಿಸಿ ಕೊಯಮುತ್ತೂರಿನ ಶ್ರೀ ಮಹಾಲಕ್ಷ್ಮಿ ಟ್ರೇಡಿಂಗ್ ಕಂಪನಿಗೆ ಲೀಗಲ್ ನೋಟೀಸ್ ನೀಡುತ್ತಾರೆ.
ಅದರಲ್ಲಿ 2 ಟನ್ ಕರಿಮೆಣಸನ್ನು ಪಡೆಯುವಾಗ ಬಿಲ್ಲಿನಲ್ಲಿ ಉತ್ತಮ ಗುಣಮಟ್ಟದ ಕರಿಮೆಣಸೆಂದು ಬರೆದು ಕಂಪನಿಯ ಪ್ರೊಪ್ರೈಟರ್ ಸೆಂದಿಲ್ ಕುಮಾರ್ ಸಹಿ ಮಾಡಲಾಗಿದೆ. ಆದರಿಂದ ಹಣವನ್ನು ಪೂರ್ತಿಯಾಗಿ 15ದಿನಗಳ ಒಳಗೆ ನೀಡದಿದ್ದಲ್ಲಿ ಕೇಸ್ ದಾಖಲಿಸ ಲಾಗುವದೆಂದು ನೋಟೀಸ್ನಲ್ಲಿ ತಿಳಿಸಲಾಗಿದೆ. ನೀಡಲಾಗಿದೆ. 15ದಿನಗಳಲ್ಲಿ ಮಹಾಲಕ್ಷ್ಮಿ ಟ್ರೇಡಿಂಗ್ ಕಂಪನಿಯಿಂದ ಯಾವದೇ ಉತ್ತರ ಹಾಗೂ ಹಣ ತಲಪದ್ದರಿಂದ ಮಡಿಕೇರಿ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದೆ.
-ಕರುಣ್ ಕಾಳಯ್ಯ