ವೀರಾಜಪೇಟೆ, ಮೇ 17: ಹಿಂದಿನ ವೈಷಮ್ಯ ಸಾಧಿಸುವ ಸಲುವಾಗಿ ತನ್ನ ಸಂಗಡಿಗನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆ ವಿ.ಕೆ.ಪ್ರದೀಪ್ (36) ಎಂಬಾತನಿಗೆ ಇಲ್ಲಿನ ಎರಡನೇ ಅಪರ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಹತ್ತು ವರ್ಷ ಸಜೆ ಹಾಗೂ ರೂ. 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 29-1-2008ರಂದು ಬೆಳಿಗ್ಗೆ 11ಗಂಟೆ ಸಮಯದಲ್ಲಿ ಕೋತೂರು ಗ್ರಾಮದ, ಕೋತೂರು ಕಾನೂರು ರಸ್ತೆಯಲ್ಲಿ ಬೈಕ್‍ನಲ್ಲಿ ಬಂದ ಒಕ್ಕಲಿಗರ ಎನ್. ತನೇಶ್ ಎಂಬಾತನಿಗೆ ಸಮೀಪದಲ್ಲಿ ಕಾರಿನಲ್ಲಿದ್ದ ವಿ.ಕೆ. ಪ್ರದೀಪ್ ಎಂಬಾತ ತನ್ನ ಬಳಿಯಿದ್ದ ಕೋವಿಯಿಂದ ಗುಂಡು ಹಾರಿಸಲು ಯತ್ನಿಸಿದಾಗ ತನೇಶ್ ತೋಟದೊಳಗೆ ಓಡಿ ಹೋಗುತ್ತಿದ್ದುದನ್ನು ಹಿಂಬಾಲಿಸಿ ಗುಂಡು ಹಾರಿಸಿದ್ದು ಗುಂಡು ಬೆನ್ನಿನ ಬದಿಗೆ ತಗಲಿ ಗಂಭೀರ ಸ್ವರೂಪದ ಗಾಯಗೊಂಡಿದ್ದವನನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಬೈಕ್‍ನ ಹಿಂಬದಿಯ ಸವಾರ ಸಂಪತ್ ಕುಮಾರ್ ಅಲ್ಲಿಯೇ ತಲೆಮರೆಸಿ ಕೊಂಡಿದ್ದರಿಂದ ಪ್ರಾಣಾಪಾಯ ಸಂಭವಿಸಲಿಲ್ಲ. ಕುಟ್ಟ ಪೊಲೀಸರು ಒಣ ಹುಲ್ಲು ವ್ಯಾಪಾರದಿಂದ ಈ ಮೂವರ ನಡುವೆ ವೈಷಮ್ಯ ಉಂಟಾದ ಕಾರಣ ಗುಂಡು ಹಾರಿಸಿ ಕೊಲೆ ಯತ್ನದ ಪ್ರಕರಣ ನಡೆದಿದೆ, ದೀರ್ಘಕಾಲದ ನಂತರ ತನೇಶ್ ಚೇತರಿಸಿಕೊಂಡನೆಂದು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದರು.
ಪೊಲೀಸರ ಆರೋಪ ಪಟ್ಟಿಯಂತೆ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ್ ಪ್ರಭು ಅವರು ಐ.ಪಿ.ಸಿ 307ಕ್ಕೆ ಹತ್ತು ವರ್ಷ ಸಜೆ, ರೂ10,000 ದಂಡ, ಐ.ಪಿ.ಸಿ 201 ವಿಧಿಗೆ ಎರಡು ವರ್ಷ ಸಜೆ ರೂ 5000 ದಂಡ, ಐ.ಪಿ.ಸಿ 341 ವಿಧಿ ಒಂದು ತಿಂಗಳ ಸಜೆ ರೂ 1000 ದಂಡ, ಕಲಂ 3 ಜೊತೆಗೆ 25ರ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯನ್ವಯ ಎರಡು ವರ್ಷ ಸಜೆ, ರೂ 4000 ದಂಡ ವಿಧಿಸಿದ್ದಾರೆ.
ಆರೋಪಿಯ ತಂದೆ ವಿ.ಜೆ.ಕೃಷ್ಣಪ್ಪ ಅವರು ಪರವಾನಗಿವುಳ್ಳ ಕೋವಿಯನ್ನು ಕೊಲೆಗೆ ಬಳಸಲು ಮಗ ಪ್ರದೀಪ್‍ನಿಗೆ ನೀಡಿದ್ದಕ್ಕಾಗಿ ಕಲಂ 30ರ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯನ್ವಯ ಆರು ತಿಂಗಳ ಸಜೆ, ರೂ 2000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳಿಂದ ದಂಡ ವಸೂಲಿ ಮಾಡಿ ಇದರಲ್ಲಿ ರೂ 10,000ವನ್ನು ಗಾಯಾಳು ತನೇಶ್‍ಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಡಿ.ನಾರಾಯಣ ವಾದಿಸಿದರು.