ಗೋಣಿಕೊಪ್ಪ ವರದಿ, ಮೇ 17: ಮಾಯಮುಡಿ ಬೋಡ್‍ನಮ್ಮೆ ಸಂಭ್ರಮದಿಂದ ನಡೆಯಿತು. ನಾಪರೆ ತಾತುವೋ ಆಚರಣೆ ಮೂಲಕ ನಮ್ಮೆಗೆ ಚಾಲನೆ ನೀಡಲಾಯಿತು. ಬಾಳಾಜಿ ಮಾನಿಲ್ ಅಯ್ಯಪ್ಪ ದೇವರಕಾಡುವಿನ ಅಯ್ಯಪ್ಪನ ಸ್ಥಾನದಲ್ಲಿ ಪೂಜಾ ವಿಧಿವಿಧಾನದ ಮೂಲಕ ನಮ್ಮೆಗೆ ಚಾಲನೆ ನೀಡಲಾಯಿತು. ನಂತರ ಪ್ರತಿದಿನ ಅಂಬಲದಲ್ಲಿ ದೇವರ ಹಾಡಿನ ಮೂಲಕ ಡೋಲು ಹೊಡೆದು ಆಚರಿಸಲಾಯಿತು.
ಸಣ್ಣುವಂಡ ಕುಟುಂಬದ ಬಲ್ಯಮನೆಯಲ್ಲಿ ಒಂದಾಗಿ ಸೇರಿದ ಗ್ರಾಮಸ್ಥರು ನಮ್ಮೆ ಆಚರಿಸಿದರು. ಮಾರಿಗುಡಿಯಲ್ಲಿ ಭಂಡಾರ ತೆಗೆದು ಬಲ್ಯಮನೆಯಿಂದ ದೇವರ ಪರಿಕರಗಳನ್ನು ಹೊತ್ತು ಬಾಲಾಜಿ ಮಾನಿಲ್ ಅಯ್ಯಪ್ಪ ಸ್ಥಾನದಲ್ಲಿ ಸೇರಿ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿನ ದೇವರ ಹಾಡು ಮೂಲಕ ದೇವರಿಗೆ ಕಾಣಿಕೆ ಬೇಡುವ ಸಾಂಪ್ರದಾಯದಂತೆ ದೇವರ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಅಯ್ಯಪ್ಪ, ಭದ್ರಕಾಳಿ, ಬೋಟೆ ಕರುಂಬ ದೇವರುಗಳನ್ನು ವಿಶೇಷವಾಗಿ ಆಹ್ವಾನಿಸಿ ಕುಣಿದರು.
ಗುರುವಾರ ಬಲ್ಯಮನೆಯಿಂದ ಕುದುರೆ (ಮರದಿಂದ ತಯಾರಿಸಿದ ಕೃತಕ ಕುದುರೆ) ಹೊತ್ತು ದೊಡ್ಡಮಾಡ್ ಸ್ಥಾನದಲ್ಲಿ ಭಕ್ತಾದಿಗಳ ಎದುರು ಕುಣಿದು ದೇವರನ್ನು ಬೇಡಿಕೊಳ್ಳಲಾಯಿತು. ಮಾನಿಲ್ ಅಯ್ಯಪ್ಪ ಸ್ಥಾನದಲ್ಲಿ ಪೂಜೆ ಸಲ್ಲಿಸಿ ಕುದುರೆ ಅರ್ಪಿಸುವ ಮೂಲಕ ನಮ್ಮೆಗೆ ತೆರೆ ಎಳೆಯಲಾಯಿತು.