ಬೆಂಗಳೂರು, ಮೇ 17: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮುಖ್ಯ ಮಂತ್ರಿಯಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ರಾಜಭವನದ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರು ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಬಿಎಸ್‍ವೈ ಮೂರನೇ ಬಾರಿಗೆ ಮತ್ತು ರಾಜ್ಯದ 24ನೇ ಮುಖ್ಯ ಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಈ ವೇಳೆ ರಾಜಭವನದ ಆವರಣದಲ್ಲಿ ಮತ್ತು ರಾಜಭವನದ ಹೊರಗೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಬಿಎಸ್‍ವೈ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿದರು.ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ರಾಜ್ಯ ನಾಯಕರಾದ ಕೆ.ಎಸ್. ಈಶ್ವರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಬಿಜೆಪಿಯ ಹಲವು ಗಣ್ಯ ನಾಯಕರು ಉಪಸ್ಥಿತರಿದ್ದರು. ಕಾರ್ಯಕರ್ತರು ಮತ್ತು ಬೆಂಬಲಿಗರ ಉತ್ಸಾಹ, ಪ್ರೋತ್ಸಾಹ, ಕೇಕೆ, ಹಾರೈಕೆಗಳ ನಡುವೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು.

ಕಿರು ಪರಿಚಯ: ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ 1943 ಫೆಬ್ರವರಿ 27 ರಂದು ಜನಿಸಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪಿಯುಸಿವರೆಗೆ ಶಿಕ್ಷಣಗಳಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದರು. ನಂತರ ಅವರು ತಮ್ಮ ಜೀವನದಲ್ಲಿ ವೃತ್ತಿ ಬದಲಾವಣೆಗಾಗಿ ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ. ಅಲ್ಲಿ ಅಕ್ಕಿ ಗಿರಣಿಯಲ್ಲಿ ಕ್ಲರ್ಕ್ ಹುದ್ದೆಗೆ ಸೇರಿಕೊಂಡರು.

ಯಡಿಯೂರಪ್ಪ ಅವರ ರಾಜಕೀಯ ಜೀವನ ಆರಂಭವಾಗಿದ್ದು 1970ರಲ್ಲಿ. ಶಿಕಾರಿಪುರ ತಾಲೂಕಿನಲ್ಲಿ ಆರ್‍ಎಸ್‍ಎಸ್‍ನ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಶಿಕಾರಿಪುರ ಪುರಸಭೆಗೆ ಚುನಾಯಿತರಾಗಿ ಬಂದರು. ಜನಸಂಘದ ತಾಲೂಕು ಘಟಕದ ಅಧ್ಯಕ್ಷರು ಕೂಡ ಆದರು.

(ಮೊದಲ ಪುಟದಿಂದ) ಯಡಿಯೂರಪ್ಪ ಅವರು ವಿಧಾನಸೌಧದ ಮೆಟ್ಟಿಲು ಹತ್ತಿದ್ದು 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಗೊಂಡಾಗ. ಬಳಿಕ ಇಲ್ಲಿಯವರೆಗೆ ಏಳು ಬಾರಿ ಶಾಸಕರಾಗಿ ಚುನಾಯಿತರಾಗಿ ಬಂದಿದ್ದಾರೆ. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಅಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿ ಮೈತ್ರಿ ಸರ್ಕಾರ ರಚಿಸಿದರು. ಜೆಡಿಎಸ್ ಮತ್ತು ಬಿಜೆಪಿ ಒಪ್ಪಂದ ಮಾಡಿಕೊಂಡು ಮೊದಲ 20 ತಿಂಗಳು ಕುಮಾರಸ್ವಾಮಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವದೆಂದು ಒಪ್ಪಂದವಾಗಿತ್ತು.

ಆದರೆ 20 ತಿಂಗಳು ಕಳೆದ ನಂತರ ಹೆಚ್.ಡಿ. ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪದಿದ್ದ ಕಾರಣ ಬಿಜೆಪಿ ಮೈತ್ರಿಯಿಂದ ಹಿಂದೆ ಸರಿಯಿತು. ಇಡೀ ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮುಂದಿನ 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂತು. ಆದರೆ ಹಲವು ಆರೋಪಗಳು ಮತ್ತು ಪಕ್ಷದವ ರಿಂದಲೇ ರಾಜಕೀಂiÀ ುದಿಂದಾಗಿ ಯಡಿಯೂರಪ್ಪನವರಿಗೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಆರೋಪಗಳ ಹಿನ್ನೆಲೆ ಬಿಜೆಪಿ ಕೇಂದ್ರ ನಾಯಕರ ತೀವ್ರ ಒತ್ತಡದಿಂದ 2011 ಜುಲೈ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ 2012ರಲ್ಲಿ ಬಿಜೆಪಿ ಶಾಸಕ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಕೂಡ ಹೊರಬಂದರು. ತಮ್ಮದೇ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ಯನ್ನು ಹುಟ್ಟುಹಾಕಿದರು.

ಆದರೆ ಆ ಪಕ್ಷ ಗೆಲುವು ಕಾಣಲಿಲ್ಲ. 2013ರಲ್ಲಿ ಮತ್ತೆ ತಮ್ಮ ಮೂಲ ಬಿಜೆಪಿಗೆ ಸೇರಿಕೊಂಡರು. 2014ರ ಲೋಕಸಭೆ ಚುನಾವಣೆ ವೇಳೆಗೆ ಅವರ ಕೆಜೆಪಿ ಪಕ್ಷ ಬಿಜೆಪಿ ಜೊತೆ ಒಟ್ಟು ಸೇರಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

2016ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನವನ್ನು ಮರು ನೇಮಕ ಮಾಡಲಾಯಿತು. ಈ ಬಾರಿ ಶಿಕಾರಿಪುರದಲ್ಲಿ ಸ್ಪರ್ಧಿಸಿದ ಯಡಿಯೂರಪ್ಪನವರು ಕಾಂಗ್ರೆಸ್‍ನ ಗಾಣಿ ಮಾಲತೇಶ್ ಅವರನ್ನು 35,397 ಮತಗಳ ಅಂತರದಿಂದ ಸೋಲಿಸಿ 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಸರ್ಕಾರ ರಚಿಸಲು ಬೇಕಾದ 112 ಶಾಸಕರ ಕೊರತೆಯಿದೆ. ಬಿಜೆಪಿ ಈಗ 104 ಸ್ಥಾನ ಮಾತ್ರ ಪಡೆದಿದೆ. ವಿಶ್ವಾಸಮತ ಸಾಬೀತು ಪಡಿಸಲು ಇನ್ನು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಯಡಿಯೂರಪ್ಪ ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ರೈತರ ಸಾಲ ಮನ್ನಾ ಹಾಗೂ ಇನ್ನಿತರ ಕೆಲವು ಅಗತ್ಯ ಕಾರ್ಯಕ್ರಮಗÀಳನ್ನು ಶೀಘ್ರ ಈಡೇರಿಸುವದಾಗಿ ಭರವಸೆಯಿತ್ತರು.

ಕಾಂಗ್ರೆಸ್ ಪ್ರತಿಭಟನೆ: ಹಲವು ವಿರೋಧಗಳ ನಡುವೆಯೂ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‍ನ ನೂತನ ಶಾಸಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ರೆಸಾರ್ಟ್‍ನತ್ತ ಮುಖ ಮಾಡಿದ್ದಾರೆ.

ಆಪರೇಷನ್ ಕಮಲಕ್ಕೆ ಚಾಲನೆ?

ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ಶಾಸಕರಿಗೆ ಬಿಜೆಪಿ ಬಹುಮತ ಇಲ್ಲದ ಹೊರತಾಗಿಯೂ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇದೀಗ ಎಲ್ಲ ಚಿತ್ತರ ವಿಶ್ವಾಸ ಮತ ಯಾಚನೆಯತ್ತ ಹೊರಳಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿದ ಬಹುಮತ ಪಡೆಯಲಿದೆ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

ಬಿಜೆಪಿ ನಾಯಕರು ಈಗಾಗಲೇ ಆಪರೇಷನ್ ಕಮಲ ಜಾರಿ ಮಾಡಿದ್ದು, ಇದರ ಪರಿಣಾಮವೇನೋ ಎಂಬಂತೆ ಕಾಂಗ್ರೆಸ್‍ನÀ ಇಬ್ಬರು ಶಾಸಕರು ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಶಾಸಕ ಪ್ರತಾಪ್ ಗೌಡ ನಾಪತ್ತೆಯಾಗಿದ್ದು, ಈ ಇಬ್ಬರು ಶಾಸಕರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ, ಆದರೆ ಬಳಿಕ ಆನಂದ್ ಸಿಂಗ್ ತಾನು ಕಾಂಗ್ರೆಸ್‍ನಲ್ಲಿಯೇ ಮುಂದುವರಿ ಯುವದಾಗಿ ಪತ್ರ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡರು.

ಈ ನಡುವೆ ನಿನ್ನೆ ಮಧ್ಯರಾತ್ರಿ ವೇಳೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರುಗಳು ತಮ್ಮ ವಕೀಲರುಗಳ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ಮೊರೆ ಹೊಕ್ಕಿದ್ದು ಗುರುವಾರ ಯಡಿಯೂರಪ್ಪ ಪ್ರಮಾಣ ವಚನ ಸ್ವೀೀಕರಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿದರು. ಆದರೆ ನ್ಯಾಯಾಲಯ ತ್ರಿಸದಸ್ಯ ಪೀಠ ತಡೆಯಾಜ್ಞೆಗೆ ನಿರಾಕರಿಸಿದ್ದು ಈ ಪ್ರಕರಣದ ಸಂಬಂಧ ಹೆಚ್ಚಿನ ವಿಚಾರಣೆಗೆ ಶುಕ್ರವಾರ (ಇಂದು) ವಾದ-ಪ್ರತಿವಾದಕ್ಕೆ ಅವಕಾಶ ಕಲ್ಪಿಸಿದೆ.