ಮಡಿಕೇರಿ, ಮೇ 17: ಜಾಗದಆರ್‍ಟಿಸಿ ಮಾಡಿ ಕೊಡುವ ಸಂಬಂಧ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಇಂದು ನಡೆದಿದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಉಮೇಶ್ ಎಂಬಾತನೇ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ. ಗೋಣಿಕೊಪ್ಪಲು ಬಳಿಯ ಅರ್ವತ್ತೊಕ್ಲು ಗ್ರಾಮ ನಿವಾಸಿ, ಮಾಜಿ ಯೋಧ ರಮೇಶ್ (ಮೊದಲ ಪುಟದಿಂದ) ಅವರು ಖರೀದಿಸಿರುವ 61/4 ಸೆಂಟ್ ಜಾಗಕ್ಕೆ ಆರ್‍ಟಿಸಿ ಮಾಡಿಕೊಡುವ ಸಲುವಾಗಿ ಅರ್ಜಿ ಸಲ್ಲಿಸಿದ್ದು, ಕಡತ ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದಿದೆ. ಅಲ್ಲಿನ ಸಿಬ್ಬಂದಿ ಉಮೇಶ್ ಆರ್‍ಟಿಸಿ ಮಾಡಿಕೊಡಲು ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ರಮೇಶ್ ಬೇಗ ಮಾಡಿಕೊಡುವಂತೆ ಕೋರಿ ರೂ. 2,500 ಲಂಚ ನೀಡಿದ್ದರಂತೆ. ಆದರೂ ಮಾಡಿಕೊಡದ್ದರಿಂದ ಈ ಬಗ್ಗೆ ವಿಚಾರಿಸಿದಾಗ ಇನ್ನೂ 7 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈಗಾಗಲೇ 2,500 ನೀಡಿರುವದಾಗಿ ಹೇಳಿದಾಗ ಉಳಿದ 5 ಸಾವಿರ ನೀಡುವಂತೆ ಕೇಳಿದ್ದಾರೆ. ಇದರಿಂದ ಬೇಸತ್ತ ರಮೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್.ಪಿ. ಉಮೇಶ್ ಜಿ. ಶೇಟ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉದಯ ಎಂ. ನಾಯಕ್, ಪೊಲೀಸ್ ಇನ್ಸ್‍ಪೆಕ್ಟರ್ ಎಂ. ದೊಡ್ಡೇಗೌಡ, ಇನ್ಸ್‍ಪೆಕ್ಟರ್ ಎಂ. ಮಹೇಶ್ ಅವರುಗಳು ಧಾಳಿ ಮಾಡಿ ಲಂಚ ಪಡೆಯುತ್ತಿದ್ದ ಸಂದರ್ಭ ಸೆರೆಹಿಡಿದಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಧಾಳಿ ಸಂದರ್ಭ ಲೋಕಾಯುಕ್ತ ಸಿಬ್ಬಂದಿಗಳಾದ ದಿನೇಶ್, ಪ್ರವೀಣ್, ಲೋಹಿತ್, ಸಜನ್, ರಾಜೇಶ್, ಸುರೇಶ್, ದೀಪಿಕಾ ಭಾಗವಹಿಸಿದ್ದರು.