ಮಡಿಕೇರಿ, ಮೇ 19: ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ರಾಜ್ಯಮಟ್ಟದ ಮೂಳೆ ಚಿಕಿತ್ಸಾ ತಜ್ಞರ ಶಿಬಿರ ಆರಂಭ ಗೊಂಡಿದೆ. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು ಕೊಡಗಿನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ವಿಪುಲ ಅವಕಾಶವಿದೆ ಎಂದು ಅಭಿಪ್ರಾಯ ಪಟ್ಟರು. ಈ ಮೂಲಕ ಜಿಲ್ಲೆಯ ಜನರಿಗೆ ಪರಿಣಿತ ಚಿಕಿತ್ಸೆಯನ್ನು ಕಲ್ಪಿಸುವ ದಿಸೆಯಲ್ಲಿ ಇಂತಹ ವಿಶೇಷ ಶಿಬಿರದ ಮೂಲಕ ಮುನ್ನುಡಿ ಬರೆಯ ಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಮೂಳೆ ತಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ವಿ.ಜೆ. ಪುರುಷೋತ್ತಮ್ ಅವರು ಮಾತನಾಡಿ, ಕೊಡಗಿನಲ್ಲಿ ಪ್ರಾರಂಭಗೊಂಡಿರುವ ಈ ಶಿಬಿರದ ಮೂಲಕ ಮುಂದಿನ ದಿನಗಳಲ್ಲಿ ಸಂಸ್ಥೆಯು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವದಾಗಿ ಭರವಸೆ ನೀಡಿದರು. ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅವಘಡಗಳು ಸಂಭವಿಸುತ್ತಿರುತ್ತವೆ. ಇಂತಹ ಸಂದರ್ಭ ಮೂಳೆ ಮುರಿತದ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದಕ್ಕಾಗಿ ತುರ್ತು ಚಿಕಿತ್ಸೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಮೂಳೆ ಚಿಕಿತ್ಸಾ ವಿಭಾಗ ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿಯ ಹಿರಿಯ ಮೂಳೆ ಚಿಕಿತ್ಸಾ ತಜ್ಞ ಡಾ. ಕೆ. ರವಿ ಅಪ್ಪಾಜಿ ಅವರು ಮಾತನಾಡಿ, ರಾಜ್ಯದ ಇತರ ವಿಭಾಗಗಳ ವೈದ್ಯಕೀಯ ತಜ್ಞರಿಗೆ ಅರಿವಾಗುವ ಮಾಹಿತಿ ನೀಡಿದರು. ಮಡಿಕೇರಿ ಗ್ರಾಮೀಣ ಪ್ರದೇಶವಾಗಿ ಉಳಿದಿಲ್ಲ. ತಾಜ್, ಕ್ಲಬ್ ಮಹೀಂದ್ರ ಮೊದಲಾದ ರೆಸಾರ್ಟ್‍ಗಳು ನಗರ ದಲ್ಲಿವೆ. ರಾಜ್ಯಮಟ್ಟದ ವೈದ್ಯಕೀಯ ವಿಚಾರ ಸಂಕಿರಣ ಶಿಬಿರಗಳನ್ನು ಮಡಿಕೇರಿಯಲ್ಲಿಯೇ ಮಾಡುವ ಮೂಲಕ ಈ ವಿಭಾಗದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸು ವಂತಾಗಲಿ ಎಂದು ಹಾರೈಸಿದರು. ದೈಹಿಕ ಅಪಾಯದ ಸಂದರ್ಭಗಳಲ್ಲಿ ಕನಿಷ್ಟಪಕ್ಷ ಮಡಿಕೇರಿಯಲ್ಲಿ ಪ್ರಾರಂಭಿಕ ತುರ್ತು ಚಿಕಿತ್ಸೆಯನ್ನು ಕೈಗೊಳ್ಳುವ ವ್ಯವಸ್ಥೆಯ ಅಗತ್ಯತೆ ಕುರಿತು ಅವರು ಮನವಿ ಮಾಡಿದರು.

ವೇದಿಕೆಯಲ್ಲಿ ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಮೇಲ್ವಿಚಾರಕ ಡಾ. ಕೆ. ಜಗದೀಶ್, ಹಿರಿಯ ಮೂಳೆ ಚಿಕಿತ್ಸಾ ತಜ್ಞ ಡಾ. ಜೋಷಿ ಪೆರೇರಾ, ಕ.ಓ.ಎ. ಕಾರ್ಯದರ್ಶಿ ಡಾ. ರೋಷನ್ ಕುಮಾರ್, ಡಾ. ಗ್ರೇಸಿ ನಾಣಯ್ಯ ಹಾಗೂ ಸ್ಥಳೀಯ ವೈದ್ಯರುಗಳಾದ ಡಾ. ಆನಂದ್ ಕುಮಾರ್, ಡಾ. ಶರತ್‍ಬಾಬು, ಡಾ. ಸಿದ್ದಿಕ್, ಡಾ. ರಾಮರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು. ಡಾ. ಹರಿಶ್ ವಂದಿಸಿದರು.