ಮಡಿಕೇರಿ, ಮೇ 18: ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನೆಲ್ಲಿಹುದಿಕೇರಿ ಸರಕಾರಿ ಪ.ಪೂ. ಕಾಲೇಜಿವ ಪ್ರಾಂಶುಪಾಲ ಜಿ. ಕೆಂಚಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಜಯದೇವಪ್ಪ ಅವರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಹಿಂಬಡ್ತಿಗೊಂಡು ಹಾಸನ ಸರಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲರಾಗಿ ಹಿಂತೆರಳಿದ್ದಾರೆ.

ಮೀಸಲಾತಿಯಡಿ ಸರಕಾರ ಈ ಹಿಂದೆ ವಿವಿಧ ಇಲಾಖೆಗಳ ಬಹಳಷ್ಟು ಅಧಿಕಾರಿಗಳು ಮತ್ತು ನೌಕರರಿಗೆ ಮುಂಬಡ್ತಿ ನೀಡಿ ವಿವಿಧೆಡೆ ಹುದ್ದೆಗಳಿಗೆ ನಿಯೋಜಿಸಿದ್ದನ್ನು ಇಲ್ಲಿ ಸ್ಮರಿಸಬಹದು. ಈ ಬಗ್ಗೆ ಕೆಲವರು ಅಸಮಾಧಾನದೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದರು.

ಸರ್ವೋಚ್ಚ ನ್ಯಾಯಾಲಯ ಮುಂಬಡ್ತಿ ತಡೆಹಿಡಿಯುವದರೊಂದಿಗೆ ಹಿಂದಿನ ಹುದ್ದೆಗಳಿಗೆ ನಿಯೋಜಿಸುವಂತೆ ಸರಕಾರಕ್ಕೆ ತಾಕೀತು ಮಾಡಿದ್ದು, ಜಿಲ್ಲೆಯ ವಿವಿಧ ಇಲಾಖೆಗಳ ಉದ್ಯೋಗಿಗಳು, ಪೊಲೀಸ್ ಠಾಣಾಧಿಕಾರಿಗಳು ಹಿಂಬಡ್ತಿಯಲ್ಲಿ ತಾವು ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಗಳಿಗೆ ವಾಪಾಸ್ಸಾಗಿದ್ದಾರೆ. ಅಂತೆಯೇ ಪ.ಪೂ. ಉಪನಿರ್ದೇಶಕರು ಹಿಂತೆರಳಿದ್ದಾರೆ. ಕೆಂಚಪ್ಪ ಅವರು ಕೊಡಗು ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು.