ವೀರಾಜಪೇಟೆ, ಮೇ 19: ಸಮುದಾಯ ಬಾಂಧವರಿಗೆ ಪ್ರತಿವರ್ಷ ಕ್ರೀಡಾಕೂಟಗಳನ್ನು ಆಯೋಜಿಸುವದರಿಂದ ಗ್ರಾಮಾಂತರ ಪ್ರದೇಶಗಳಲ್ಲಿರುವ ಸಮುದಾಯದ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ರಾಷ್ಟ್ರೀಯ ಹಾಕಿ ಆಟಗಾರ ಬಿ.ಎಸ್. ಸತೀಶ್ ಹೇಳಿದರು.

ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಹದಿನೇಳನೇ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದ ಸತೀಶ್, ಸಂಘದ ಸಮುದಾಯದ ಕುಟುಂಬಗಳ ಒಮ್ಮತದಿಂದ ಸಂಘದ ಏಳಿಗೆ ಪ್ರಗತಿ ಸಾಧ್ಯ ಎಂದರು.

ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೂನಿಯರ್ ಕಾಲೇಜಿನ ಆರ್. ಮೋಹನ್ ಅವರು ಸಮುದಾಯಗಳು ವರ್ಷಂಪ್ರತಿ ಕ್ರೀಡೆಗೆ ಆದ್ಯತೆ ನೀಡುವದರಿಂದ ಸಮುದಾಯದ ಬೆಳವಣಿಗೆಯಾಗಲಿದೆ ಎಂದು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಬಿ.ಎಂ. ಕುಮಾರ್ ಮಾತನಾಡಿ, ಸಮುದಾಯದ ಮಕ್ಕಳಿಗೆ ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಇದರಿಂದಲೂ ಸಮುದಾಯದ ಪ್ರಗತಿ ಸಾಧ್ಯ ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಮಾತನಾಡಿ, ಸಂಘದ ವತಿಯಿಂದ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಸದಸ್ಯರುಗಳು ಪರಸ್ಪರ ಸಹಕರಿಸಬೇಕು. ಸಂಘ ಆಯೋಜಿಸುವ ಕ್ರೀಡಾ ಕೂಟಗಳಿಂದ ಸಮುದಾಯದಲ್ಲಿ ಎಲೆ ಮರೆಯ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ. ಸಮುದಾಯದ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತಾಗ ಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್.ದಿನೇಶ್, ಉದ್ಯಮಿ ಬಿ.ಆರ್.ಬೋಜಪ್ಪ, ಬೆಂಗಳೂರಿನ ಉದ್ಯಮಿ ರಂಜಿತ್ ಕುಮಾರ್, ಪವಿತ್ರ ಸುಂದರ ಉಪಸ್ಥಿತರಿದ್ದರು.

ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ.ಸತೀಶ್ ಸ್ವಾಗತಿಸಿ ನಿರೂಪಿಸಿದರು. ಸಂಘದ ಗೌರವ ಅಧ್ಯಕ್ಷ ಬಿ.ರಾಜ, ಉಪಾಧ್ಯಕ್ಷ ಬಿ.ಎಂ.ಗಣೇಶ್, ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಖಜಾಂಚಿ ಬಿ.ಕೆ.ರಾಮಣ್ಣ ಹಾಜರಿದ್ದರು.

ಸಮಾರಂಭದ ನಂತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಆರ್.ಮೋಹನ್ ಅವರು ಬ್ಯಾಟಿಂಗ್ ಮಾಡಿ ಚಾಲನೆ ನೀಡಿದರು. ಕ್ರೀಡಾ ಕೂಟದ ಸಮಾರೋಪ ತಾ:20ರಂದು ಅಪರಾಹ್ನ ನಡೆಯಲಿದೆ.