ಮಡಿಕೇರಿ, ಮೇ 18: ತನ್ನ ಪತಿಯು ತೋಟದ ಬಳಿ ಬೆಂಕಿ ಹೊತ್ತಿಕೊಂಡಿದ್ದ ಸ್ಥಳದಲ್ಲಿ ಸುಟ್ಟು ಹೋದ ಗಾಯಗಳಿಂದ ಕೂಡಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯಕೊಡಿಸುವಂತೆ ಮೃತ ವ್ಯಕ್ತಿಯ ಪತ್ನಿ ಅಳಲು ತೋಡಿ ಕೊಂಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗುವದರೊಂದಿಗೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ನೈಜಾಂಶ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಸುಳಿವು ನೀಡಿವೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ವತೋಕ್ಲು ಗ್ರಾಮದ ನಿವಾಸಿ, ಮಾಜಿ ಸೈನಿಕ ಮೂಟೇರ ಆನಂದ್ ಎಂಬವರು ಕಳೆದ ಮಾರ್ಚ್ 24 ರಂದು ನಿಗೂಢ ಸಾವನ್ನಪ್ಪಿರುವದಾಗಿ ಮೃತರ ಪತ್ನಿ ಕುಸುಮಾವತಿ ದೂರಿಕೊಂಡಿದ್ದಾರೆ.

ಘಟನೆಯ ದಿನದಂದು ತನ್ನ ಪತಿಯನ್ನು ಕೆಲವರು ತೋಟಕ್ಕೆ ಬೆಂಕಿ ಬಿದ್ದಿರುವದಾಗಿ ಹೇಳಿ ಕರೆದುಕೊಂಡು ಹೋಗಿದ್ದು, ತಾನು ಬೆಳಿಗ್ಗೆ ಭಾಗಮಂಡಲ ಸಿ.ಪಿ.ಬಿ.ಲಿ.ಸಿ.ಎಸ್. ನಲ್ಲಿ ಕೆಲಸಕ್ಕೆ ತೆರಳುವದರೊಂದಿಗೆ ಹಿಂತಿರುಗಿ ಸಂಜೆ ಬರುವಷ್ಟರಲ್ಲಿ ದುರ್ಘಟನೆ ಸಂಭವಿಸಿದ್ದಾಗಿ ಆಕೆ ದೂರಿನಲ್ಲಿ ವಿವರಿಸಿದ್ದಾರೆ. ಅಲ್ಲದೆ ಪತಿಯ ಸಾವಿನ ಬಗ್ಗೆ ತನಗೆ ಸಂಶಯ ವಿದ್ದು, ಪೊಲೀಸ್ ಇಲಾಖೆಯಿಂದ ಸೂಕ್ತ ತನಿಖೆಯೊಂದಿಗೆ ಮರಣೋತ್ತರ ಪರೀಕ್ಷೆ ವರದಿ ಸಹಿತ ಸತ್ಯಾಂಶ ಬಹಿರಂಗಗೊಳಿಸಿ ನ್ಯಾಯ ದೊರಕಿಸಿ ಕೊಡುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.