ಬೆಂಗಳೂರು, ಮೇ 19: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸದೇ ಸದನದಲ್ಲಿ ವಿದಾಯ ಭಾಷಣ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವದಾಗಿ ಘೋಷಿಸಿದರು.ತಮ್ಮ ಭಾಷಣದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದರು. ಇತರ ಪಕ್ಷಗಳ ಶಾಸಕರನ್ನು ಸೆಳೆದು ಬಹುಮತ ಸಾಬೀತುಪಡಿಸುವ ಪಣ ತೊಟ್ಟಿದ್ದ ಯಡಿಯೂರಪ್ಪ ಕೊನೆ ಕ್ಷಣದವರಗೂ ತಮ್ಮ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಪ್ರಮುಖರ ಕೈಚಳಕಕ್ಕೆ ತಲೆಬಾಗುವಂತಾಯಿತು. ಪ್ರತಿ ಪಕ್ಷಗಳ ಓರ್ವ ಸದಸ್ಯರನ್ನೂ ಸೆಳೆಯಲು ವಿಫಲಗೊಂಡ ಹಿನ್ನೆಲೆಯಲ್ಲಿ ವಿಶ್ವಾಸಮತ ಕೇಳುವದನ್ನು ಕೈ ಬಿಟ್ಟು ವಿದಾಯ ಭಾಷಣದ ಮೂಲಕ ನೇರವಾಗಿ ಪದ ತ್ಯಾಗವೇ ಸೂಕ್ತ ಎಂದು ನಿರ್ಧಾರಕ್ಕೆ ಬಂದರು.ಇದರಿಂದಾಗಿ 55 ಗಂಟೆಗಳ ಕಾಲ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಭಾಗಶ: ಅಧಿಕಾರ ನಡೆಸಿದ ಯಡಿಯೂರಪ್ಪ ತಮ್ಮ ಸ್ಥಾನವನ್ನು ಕಳೆದುಕೊಂಡರು.ಸದನದಲ್ಲಿ ಸುದೀರ್ಘ ಭಾಷಣ ಮಾಡಿದ ಯಡಿಯೂರಪ್ಪ, ನಾನು ಜೀವನದ ಕಡೆಯ ಕ್ಷಣದವರೆಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ. ರೈತರಿಗೆ ನೀರು ಕೊಡಲು ನಮಗೆ ಸಾಧ್ಯವಾಗಿಲ್ಲ. ಸಂಕಷ್ಟದಲ್ಲಿ ಒದ್ದಾಡುತ್ತಿರುವ ಜನರಿಗೆ ನೆಮ್ಮದಿ ನೀಡಲು ಆಗಿಲ್ಲ ಎಂದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಬಡವರನ್ನು ಹಸಿವು ಮುಕ್ತ ಮಾಡಲಾಗಿಲ್ಲ. ರೈತರಿಗೆ ಕುಡಿಯುವ ನೀರು, ಬೆಳೆಗೆ ನೀರು, ಕೆರೆಕಟ್ಟೆ ತುಂಬಿಸಲು ಆಗಿಲ್ಲ. ಈ ನಾಡಿನ ಅನ್ನದಾತ ರೈತ ಸಮಸ್ಯೆಯಲ್ಲಿದ್ದಾನೆ. ರೈತರಿಗೆ ಬೆಂಬಲ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ರೈತರಿಗಾಗಿ ನಾನು ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ದ ಎಂದರು.

ಇದೇ ವೇಳೆ ಐದು ವರ್ಷಗಳ ಕಾಲ ಬಿಜೆಪಿ ನಡೆದು ಬಂದ ಹಾದಿಯನ್ನು ನೆನೆದ ಬಿಎಸ್‍ವೈ, ಜನಾದೇಶ ಕಾಂಗ್ರೆಸ್ - ಜೆಡಿಎಸ್‍ಗಿಲ್ಲ, ಬಿಜೆಪಿಗಿದೆ. ರಾಜ್ಯದ ಜನರು ಕಾಂಗ್ರೆಸ್- ಜೆಡಿಎಸ್ ಅನ್ನು ತಿರಸ್ಕರಿಸಿರುವದು ಇಡೀ ರಾಜ್ಯದ ಜನರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಅಪ್ಪನ ಆಣೆ ಮಾಡಿಕೊಂಡ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೈ ಜೋಡಿಸಿರುವದಕ್ಕೆ ನನ್ನ ವಿರೋಧ ಇದೆ. ನಮ್ಮನ್ನು ಜನ ಏಕೈಕ ದೊಡ್ಡ ಪಕ್ಷವಾಗಿ ಆರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಗಿಂತ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದೆ. ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರದಲ್ಲೂ ಪರಿವರ್ತನಾ ಯಾತ್ರೆ ಮಾಡಿದ್ದೆವು. ಎರಡು ವರ್ಷ ನಿರಂತರವಾಗಿ ಜನರ ಸಮಸ್ಯೆ ಅರಿತೆ. ಪರಿವರ್ತನಾ ಯಾತ್ರೆಯಲ್ಲಿ ಸಿಕ್ಕ ಜನಬೆಂಬಲಕ್ಕೆ ನಾನು ಋಣಿ ಎಂದರು. “ಕುಮಾರಸ್ವಾಮಿಯವರೇ, ರಾಜ್ಯದ ಜನತೆಗಾಗಿ ನಿರಂತರ ಹೋರಾಟ ಮಾಡುತ್ತೇನೆ, ಸಾಯುವದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ, ಅಧಿಕಾರ ನೀಡ ದಿದ್ದರೇ ಸಾಯುತ್ತೇನೆ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವದಿದ್ದರೆ ಜನರಿಗಾಗಿ ಸಾಯುತ್ತೇನೆ ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ” ಎಂದು ಕುಮಾರಸ್ವಾಮಿಗೆ ತಮ್ಮ ಭಾಷಣದಲ್ಲಿ ಬಿಎಸ್.ವೈ ಟಾಂಗ್ ನೀಡಿದರು.

ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮತಯಾಚಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ‘ನಾನು ಇನ್ನು ಹೆಚ್ಚು ದಿನ ಬದುಕುವದಿಲ್ಲ. ಬದುಕಬೇಕಿದ್ದರೆ ನೀವು ಜೆಡಿಎಸ್ ಗೆ ಮತ ಹಾಕಬೇಕು’ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದರು.

104 ಶಾಸಕರ ಸಂಖ್ಯಾಬಲವಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೇ.17 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಯಡಿಯೂರಪ್ಪ ಅವರ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಮೇ.19 ರಂದು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ವಿದಾಯ ಭಾಷಣದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.

ಮೇ 17ರಂದು ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಮೂರೇ ದಿನಕ್ಕೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ.

ಪತ್ತೆಯಾದ ಶಾಸಕರು

ಈ ನಡುವೆ ವಿಶ್ವಾಸಮತಕ್ಕೂ ಮುನ್ನ ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿ ಕಾಂಗ್ರೆಸ್ ಪಾಳಯದ ಆತಂಕಕ್ಕೆ ಕಾರಣವಾಗಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ

(ಮೊದಲ ಪುಟದಿಂದ) ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಕೊನೆಗೂ ಪತ್ತೆಯಾಗಿದ್ದು, ವಿಧಾನಸೌಧಕ್ಕೆ ಆಗಮಿಸಿದರು

ಬೋಪಯ್ಯ ಮುಂದುವರಿಕೆ

ಇದಕ್ಕೂ ಮುನ್ನ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರನ್ನಾಗಿ ಮುಂದುವರಿಯಲು ಬಿಡಬಾರದು ಎಂಬ ಕಾಂಗ್ರೆಸ್-ಜೆಡಿಎಸ್ ವಾದಕ್ಕೆ ಸುಪ್ರೀಂಕೋರ್ಟಿನಲ್ಲಿ ಸೋಲಾಗಿದ್ದು, ಬೋಪಯ್ಯ ಅವರೇ ಮುಂದುವರಿದರು. ಇದು ಬಿಜೆಪಿಗೆ ಸಿಕ್ಕ ಜಯ. ಕಾನೂನುಬದ್ಧವಾಗಿ ನೇಮಕವಾದ ಕೆ.ಜಿ. ಬೋಪಯ್ಯ ಅವರ ನೇಮಕಾತಿಯನ್ನು ರದ್ದುಪಡಿಸಬೇಕೆಂದರೆ ವಿಶ್ವಾಸಮತವನ್ನೂ ಮುಂದೂಡಬೇಕಾಗುತ್ತದೆ ಎಂದು ಸಿಬಲ್ ಅವರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಆದರೆ, ವಿಶ್ವಾಸಮತವನ್ನು ‘ಲೈವ್’ ಪ್ರಸಾರ ಮಾಡಿದರೆ ಪಾರದರ್ಶಕತೆಯನ್ನು ಕಾಪಾಡಬಹುದು ಎಂದೂ ಸುಪ್ರೀಂ ಸೂಚನೆ ನೀಡಿದ್ದು ಮಾಧ್ಯಮದವರಿಗೆ ಅನುಕೂಲ ಕಲ್ಪಿಸಿತು.

ಹಂಗಾಮಿ ವಿಧಾನ ಸಭಾಧ್ಯಕ್ಷರನ್ನಾಗಿ ಕೆಜಿ ಬೋಪಯ್ಯ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿಕ್ರಿ, ಬೊಬ್ಡೆ ಮತ್ತು ಅಶೋಕ್ ಭೂಷಣ ಅವರ ವಿಭಾಗೀಯ ಪೀಠ ನಡೆಸಿತು. ಬಿಜೆಪಿ ಪರವಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಮತ್ತು ಮುಕುಲ್ ರೋಹಟ್ಗಿ ಅವರು ವಾದ ಮಂಡಿಸಿದರು. ಕಾಂಗ್ರೆಸ್-ಜೆಡಿಎಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಮತ್ತು ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸಿದರು.

ಹೆಚ್.ಡಿ.ಕೆಗೆ ಆಹ್ವಾನ

ಈ ಎಲ್ಲ ಬೆಳವಣಿಗೆಗಳ ಬಳಿಕ ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟವು ನೂತನ ಸರಕಾರ ರಚಿಸುವಂತೆ ರಾಜ್ಯಪಾಲರು ಕುಮಾರಸ್ವಾಮಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಹೆಚ್ ಡಿ ಕೆ ಅವರು ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.