ಮಡಿಕೇರಿ, ಮೇ 19: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪಧವೀಧರರ ಕ್ಷೇತ್ರದ, ನ್ಶೆರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಯಾವದೇ ಲೋಪದೋಷವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಅಧಿಕಾರಿಗಳು ಮತಗಟ್ಟೆಗಳ ವೀಕ್ಷಣೆ ಮಾಡಿ ವರದಿ ನೀಡಬೇಕು ಎಂದು ತಿಳಿಸಿದರು.ಚುನಾವಣಾ ಆಯೋಗ ತಾ. 15 ರಂದು ಅಧಿಸೂಚನೆ ಹೊರಡಿಸಿದೆ. ತಾ. 22 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ತಾ. 23 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ತಾ. 25 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಜೂನ್ 8 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 12 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆಯು ಜೂನ್ 15 ರವರೆಗೆ ಜಾರಿಯಲ್ಲಿರುತ್ತದೆ ಎಂದು ಪಿ.ಐ. ಶ್ರೀವಿದ್ಯಾ ತಿಳಿಸಿದರು.
ಮತಗಟ್ಟೆ ವಿವರ ಇಂತಿದೆ: ಪಟ್ಟಣ ಪಂಚಾಯಿತಿ ಸೋಮವಾರಪೇಟೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕುಶಾಲನಗರ, ನಗರಸಭೆ ಮಡಿಕೇರಿ, ಪಟ್ಟಣ ಪಂಚಾಯಿತಿ ವೀರಾಜಪೇಟೆ.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಮೇಶ ಪಿ. ಕೋನರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳಾ, ಚುನಾವಣಾ ತಹಶೀಲ್ದಾರಾದ ರಮಾದೇವಿ, ತಹಶೀಲ್ದಾರರಾದ ಶಾರದಾಂಭ, ಗೋವಿಂದರಾಜು, ಬಡಾಕರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯಿತ್ರಿ, ಲೋಕೇಶ್, ನಾಗರಾಜಯ್ಯ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು.