ಗೋಣಿಕೊಪ್ಪಲು, ಮೇ 19 : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬದ ಪ್ರಯುಕ್ತ ತಾ.20 ರಂದು (ಇಂದು) ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಸುಮಾರು 3 ಗಂಟೆಯ ಬಳಿಕ ಊರಿನ ಪ್ರಮುಖ ಭದ್ರಕಾಳಿ ದೇವಸ್ಥಾನದ ಅಂಬಲದಲ್ಲಿ ಸೇರಿ, ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಎರಚಾಡಿಕೊಳ್ಳುವದು ಇಲ್ಲಿನ ವಿಶೇಷ. ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.