ಮಡಿಕೇರಿ, ಮೇ 18: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಅಳಮೇಂಗಡ, ತಂಬುಕುತ್ತಿರ ತಂಡಗಳು ಸೇರಿದಂತೆ ಚೀಯಕ್ಪೂವಂಡ, ಮಾಳೆಯಂಡ, ಕಾಣತಂಡ ತಂಡಗಳು ಮುನ್ನಡೆ ಸಾಧಿಸಿವೆ. ಇಂದು ನಡೆದ ಪಂದ್ಯಾವಳಿಯಲ್ಲಿ ಮಂದೇಯಂಡ ತಂಡ 5 ಒವರ್ಗಳಲ್ಲಿ 2 ವಿಕೆಟ್ಗೆ 47 ರನ್ ಗಳಿಸಿದರೆ, ನೆಲ್ಲಚಂಡ ತಂಡ 6 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿ 18 ರನ್ಗಳ ಅಂತರದಿಂದ ಸೋಲನುಭವಿಸಿತು. ನೆಲ್ಲಚಂಡ ಸುಜನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ನಂದಿರ ತಂಡ 7 ವಿಕೆಟ್ಗೆ 27 ರನ್ ಗಳಿಸಿದರೆ, ಚೀಯಕ್ಪೂವಂಡ ತಂಡ 1 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಚೀಯಕ್ಪೂವಂಡ ಅನಿಲ್ 15 ರನ್ ಗಳಿಸಿದರೆ, ನಂದಿರ ಪ್ರತಿಕ್ ಪಂದ್ಯ ಪರುಷ ಪ್ರಶಸ್ತಿ ಪಡೆದರು. ಮತ್ತೊಂದು ಪಂದ್ಯದಲ್ಲಿ ಮಂದೆಯಂಡ ತಂಡ 4 ವಿಕೆಟ್ಗೆ 36 ರನ್ ಗಳಿಸಿದರೆ, ನೆರವಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿ ಗುರಿ ಸಾಧಿಸಿತು. ನೆರವಂಡ ಪ್ರಶಾಂತ್ 6 ಎಸೆತಗಳಿಗೆ 31 ರನ್ ಬಾರಿಸಿ ಗಮನ ಸೆಳೆದರು. 10 ರನ್ ಗಳಿಸಿದ ಮಂದೇಯಂಡ ದಿನೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಕೊಟ್ಟಂಗಡ ತಂಡ 5 ವಿಕೆಟ್ಗೆ 27 ರನ್ ಗಳಿಸಿದರೆ, ತಂಬುಕುತ್ತಿರ ತಂಡ 4 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿ ಗುರಿ ಸಾಧಿಸಿತು. ತಂಬುಕುತ್ತಿರ ಶರಣು 4 ಎಸೆತಗಳಲ್ಲಿ 15 ರನ್ ಗಳಿಸಿ ಗಮನ ಸೆಳೆದರೆ, ಕೊಟ್ಟಂಗಡ ಮಧು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಅಳಮೇಂಗಡ ತಂಡ 3 ವಿಕೆಟ್ಗೆ 50 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕನ್ನಂಡ ತಂಡ 6 ವಿಕೆಟ್ ಕಳೆದುಕೊಂಡು 24 ರನ್ ಮಾತ್ರ ಗಳಿಸಿ 27 ರನ್ಗಳ ಅಂತರದಿಂದ ಸೋಲನುಭವಿಸಿತು.
ಅಳಮೇಂಗಡ ದಿಲೀಪ್ 22 ರನ್ ಗಳಿಸಿದರೆ, ಸೋಮಯ್ಯ ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದರು. 19 ರನ್ ಗಳಿಸಿದ ಕನ್ನಂಡ ಅರುಣ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಕನ್ನಿಕಂಡ ತಂಡ 3 ವಿಕೆಟ್ಗೆ 27 ರನ್ ಗಳಿಸಿದರೆ, ಮಾಳೆಯಂಡ ತಂಡ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
11 ರನ್ ಗಳಿಸಿದ ಕನ್ನಿಕಂಡ ಪಳಂಗಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಪಾಸುರ ತಂಡ 4 ವಿಕೆಟ್ಗೆ 30 ರನ್ ಸಂಪಾದಿಸಿದರೆ, ಕಾಣತಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. 21 ರನ್ ಗಳಿಸಿದ ಪಾಸುರ ಕಿಶನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.