ಗೋಣಿಕೊಪ್ಪ, ಮೇ 18: ಒಕ್ಕಲಿಗ ಕುಲಬಾಂಧವರನ್ನು ಒಂದೆಡೆ ಒಗ್ಗೂಡಿಸಿ ಸಾಮರಸ್ಯರೊಂದಿಗೆ ಬಾಂಧವ್ಯ ಬೆಳೆಸಲು ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯು ನಡೆಸಿಕೊಂಡು ಬರುತ್ತಿರುವ ಕ್ರೀಡೋತ್ಸವ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು, ತಾ. 19ರಿಂದ (ಇಂದಿನಿಂದ) ಎರಡು ದಿನಗಳ ಕಾಲ ಹಾತೂರಿನಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಎನ್. ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಕಾಕೋಟುಪರಂಬುವಿನ ಗೋಪಾಲಕೃಷ್ಣ ಉದ್ಘಾಟಿಸುವರು ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ದೊಡ್ಡಮನೆ ಎ. ಸುಬ್ರಮಣಿ, ವಿ.ಜೆ. ದಿನೇಶ್, ವಿ.ವಿ.ಚಿಕ್ಕಣ್ಣ, ಹಂಚಿನಮನೆ ಸುಜಾತ ಮಹೇಶ್ ಕುಮಾರ್ ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಅಂಗವಾಗಿ ಪುರುಷರಿಗೆ ಹಾಗೂ 15 ವರ್ಷದೊಳಗಿನ ಮಕ್ಕಳಿಗೆ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಈ ಬಾರಿ ಕೊಡಗಿನ ಮೂಲೆಮೂಲೆಗಳಿಂದ ಆಗಮಿಸಿರುವ ಬಲಿಷ್ಠ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಕ್ರೀಡಾಕೂಟದ ಅಂಗವಾಗಿ ಸರ್ವರಿಗೂ ಅನುಕೂಲವಾಗುವಂತೆ ಊಟೋಪಚಾರದ ವ್ಯವಸ್ಥೆಯನ್ನು ಯುವ ವೇದಿಕೆ ಹಮ್ಮಿಕೊಂಡಿದೆ.