ಮಡಿಕೇರಿ, ಮೇ 19: ಕೊಡವ ಕೌಟುಂಬಿಕ ಹಾಕಿ ಉತ್ಸವ ಒಂದು ಉತ್ತಮ ಚಿಂತನೆಯ ಪಂದ್ಯಾವಳಿಯಾಗಿದೆ ಎಂದು ಮಾಜಿ ಒಲಂಪಿಯನ್, ಭಾರತ ಹಾಕಿ ತಂಡದ ಮಾಜಿ ನಾಯಕ ಮನೆಯಪಂಡ ಎಂ. ಸೋಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ತಾ. 20 ರಂದು (ಇಂದು) ನಾಪೋಕ್ಲುವಿನಲ್ಲಿ ನಡೆಯಲಿರುವ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯದ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಇವರು ತಾ. 19ರ ಸಂಜೆ ಬೆಟ್ಟಗೇರಿಯ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ‘ಶಕ್ತಿ’ಯೊಂದಿಗೆ ಈ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಅವರು, ಇದು ಕೇವಲ ವಿಜೃಂಭಣೆ ಮಾತ್ರವಲ್ಲ, ಜನಾಂಗದ ಒಗ್ಗಟ್ಟಿಗೂ ಕುಟುಂಬದ ನಡುವಿನ ಸ್ನೇಹ ಸಂಬಂಧಕ್ಕೂ ಕೂಡ ಪೂರಕವಾಗಿದೆ ಎಂದು ನುಡಿದರು.ಎಂ.ಎಂ. ಸೋಮಯ್ಯ ಅವರು ಹಾಕಿಯಲ್ಲಿ 3 ಒಲಂಪಿಕ್ಸ್ ಆಡಿದ ಶ್ರೇಷ್ಠ ಆಟಗಾರರಾಗಿದ್ದಾರೆ. 1980ರ ಒಲಂಪಿಕ್ಸ್ನಲ್ಲಿ ಭಾರತ ತಂಢ ಚಿನ್ನದ ಪದಕ ಗೆದ್ದಾಗ ಇವರು ತಂಡದ ಆಟಗಾರರಲ್ಲಿ ಒಬ್ಬರಾಗಿದ್ದರು ಮಾತ್ರವಲ್ಲದೆ ಭಾರತ ತಂಡದ ನಾಯಕರೂ ಆಗಿದ್ದ ಹಿರಿಮೆಯನ್ನು ಹೊಂದಿದ್ದಾರೆ. ಆಲ್ ಏಷ್ಯನ್ ಸ್ಟಾಫ್ ಇಲವೆನ್ ತಂಡದಲ್ಲಿ ವಿಶ್ವ ಹಾಕಿ ತಂಡದ ವಿರುದ್ಧ ಆಡಿರುವ ಕೊಡಗಿನ ಏಕೈಕ ಆಟಗಾರರೂ ಇವರಾಗಿದ್ದಾರೆ.