ಮಡಿಕೇರಿ, ಮೇ 19: ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಕೆ.ಕೆ. ಮಂಜುನಾಥ್ ಕುಮಾರ್ ಹಾಗೂ ಎಸ್.ಪಿ. ದಿನೇಶ್ ತಾ. 21ರಂದು (ನಾಳೆ) ನಾಮಪತ್ರ ಸಲ್ಲಿಸಲಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುವದರಲ್ಲಿ ಯಾವದೇ ಅನುಮಾನವಿಲ್ಲ ಎಂದು ಶಿವು ಮಾದಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶಿಕ್ಷಕರ ಕ್ಷೇತ್ರದಿಂದ ಕೆ.ಕೆ. ಮಂಜುನಾಥ್ ಕುಮಾರ್ ಮತ್ತು ಪದವೀಧರರ ಕ್ಷೇತ್ರದಿಂದ ದಿನೇಶ್ ಅವರು ಈ ಹಿಂದೆಯೂ ಸ್ಪರ್ಧಿಸಿದ್ದು, ಅತ್ಯಲ್ಪ ಮತದಿಂದ ಪರಾಜಯ ಕಂಡಿದ್ದರು. ಈಗ ಬಹಳ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಇವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಸುಮಾರು 4 ಸುತ್ತು ಮತದಾರರನ್ನು ಭೇಟಿ ಮಾಡಿದ್ದು, ಕೊಡಗಿನ ಮತಗಳೇ ನಿರ್ಣಾಯಕವಾಗಲಿವೆ ಎಂದವರು ಹೇಳಿದ್ದಾರೆ.

ತಾ. 21ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಪದವೀಧರರ ಕ್ಷೇತ್ರಕ್ಕೆ ದಿನೇಶ್ ಮತ್ತು 11 ಗಂಟೆಗೆ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ. ಮಂಜುನಾಥ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದು, ಕೆ.ಪಿ.ಸಿ.ಸಿ. ಪದಾಧಿಕಾರಿಗಳು, ಎಂ.ಎಲ್.ಸಿ. ಬ್ಲಾಕ್ ಅಧ್ಯಕ್ಷರುಗಳು, ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಿವು ಮಾದಪ್ಪ ತಿಳಿಸಿದ್ದಾರೆ.