ಸಿದ್ದಾಪುರ, ಮೇ 18: ಕಾಡಾನೆ ಧಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಬಡ ಕಾರ್ಮಿಕ ಕುಮಾರನಿಗೆ ಜೆ.ಡಿ.ಎಸ್. ಪಕ್ಷದ ಅಧ್ಯಕ್ಷ ಸಂಕೇತ್ ಪೂವಯ್ಯ ಸಂಜೆ ಕುಮಾರನ ನಿವಾಸಕ್ಕೆ ತೆರಳಿ ವೈಯಕ್ತಿಕ ಧನ ಸಹಾಯ ನೀಡಿ ಮಾನವೀಯತೆ ಮೆರೆದರು.

ಕಳೆದ ಒಂದು ವಾರದ ಹಿಂದೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿಯಾಗಿರುವ ಪಟ್ಟಮಾಡ ಬೆಳ್ಯಪ್ಪ ಎಂಬವರ ಕಾಫಿ ತೋಟದೊಳಗೆ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಏಕಾಏಕಿ ಕುಮಾರ (55) ಎಂಬವರ ಮೇಲೆ ಧಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದು ಕಾಲಿನಿಂದ ಬೆನ್ನಿನ ಭಾಗಕ್ಕೆ ತುಳಿದ ಪರಿಣಾಮ ಕುಮಾರನ ಬೆನ್ನಿಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ಇದೀಗ ಕುಮಾರ ತೋಟ ಲೈನ್‍ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದು, ನೋವು ತಾಳಲಾರದೆ ಕೂಲಿ ಕೆಲಸಕ್ಕೂ ತೆರಳಲಾರದೇ ಸಂಕಷ್ಟದಲ್ಲಿದ್ದಾನೆ. ಈ ವಿಚಾರ ತಿಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸಂಜೆ ಕುಮಾರನ ಲೈನ್‍ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ ವೈಯಕ್ತಿಕವಾಗಿ ರೂ. 10 ಸಾವಿರ ಸಹಾಯ ನೀಡಿ ಮಾನವೀಯತೆ ಮೆರೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆ ಧಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕುಮಾರನಿಗೆ ಅರಣ್ಯ ಇಲಾಖೆ ಕೇವಲ ರೂ. 2 ಸಾವಿರ ಪರಿಹಾರ ನೀಡಿ ನಿರ್ಲಕ್ಷ್ಯ ಧೋರಣೆ ತಾಳಿದೆ. ಇದು ಖಂಡನೀಯ. ಕುಮಾರನ ಭವಿಷ್ಯಕ್ಕೆ ತೊಂದರೆಯಾಗಿದ್ದು, ಕಾರ್ಮಿಕನಾಗಿರುವ ಕುಮಾರ ಇದೀಗ ಕಾಡಾನೆ ಧಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಉತ್ತಮ ರೀತಿಯ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ, ಕುಮಾರ ಕೆಲಸ ಮಾಡುತ್ತಿರುವ ತೋಟದ ಸುತ್ತಮುತ್ತಲಿನ ತೋಟದೊಳಗೆ ಕಾಡಾನೆಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದು, ಕೂಡಲೇ ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ಕಾಡಾನೆಗಳನ್ನು ನಾಳೆಯಿಂದಲೇ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಜೆ.ಡಿ.ಎಸ್. ಪಕ್ಷದ ಮುಖಂಡರುಗಳಾದ ವಿ.ಎಸ್. ಆನಂದಕುಮಾರ್, ಹೆಚ್.ಟಿ. ವಸಂತ್, ಹೆಚ್.ಜೆ. ಸಂತೋಷ್ ಕುಮಾರ್, ಹೆಚ್.ಎಂ. ಅಣ್ಣಪ್ಪ, ಹೆಚ್.ಎಂ. ಚಂದ್ರು ಹಾಜರಿದ್ದರು.