ಶಾಸಕರು ಅನರ್ಹತೆ ಭೀತಿಯಿಂದ ಪಾರು

ಬೆಂಗಳೂರು, ಮೇ 18: 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್ ಬಂಡಾಯ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ. ಏಳು ಜೆಡಿಎಸ್ ಶಾಸಕರ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿರ್ಗಮಿತ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು ಇಂದು ಬೆಳಿಗ್ಗೆ ವಜಾಗೊಳಿಸಿದ್ದಾರೆ. ತಾ. 17 ರಂದೇ 14ನೇ ವಿಧಾನಸಭೆ ವಿಸರ್ಜನೆಯಾಗಿದೆ. ಹಾಗಾಗಿ ಶಾಸಕರ ಅನರ್ಹತೆ ಕೋರಿದ ಅರ್ಜಿಗೆ ಸಾಂವಿಧಾನಿಕ ಮೌಲ್ಯ ಇಲ್ಲ ಎಂದು ಹೇಳಿ ಕೆ.ಬಿ. ಕೋಳಿವಾಡ ಅರ್ಜಿ ವಜಾ ಮಾಡಿದ್ದಾರೆ. ಅಡ್ಡಮತದಾನ ಮಾಡಿದ್ದ ಏಳು ಶಾಸಕರ ಪೈಕಿ ಮೂರು ಮಂದಿ ಮರು ಆಯ್ಕೆಯಾಗಿದ್ದು, ಅವರು ಅನರ್ಹತೆ ಭೀತಿ ಎದುರಿಸುತ್ತಿದ್ದರು. ಕೆ.ಬಿ. ಕೋಳಿವಾಡ ಅವರು ನೂತನ ಸ್ವೀಕರ್ ನೇಮಕವಾಗುವವರೆಗೆ ಸ್ಪೀಕರ್ ಆಗಿ ಇರುತ್ತಾರೆ. ಇಂದು ಮಧ್ಯಾಹ್ನ ಹಂಗಾಮಿ ಸ್ವೀಕರ್ ಆಗಿ ಕೆ.ಜಿ. ಬೋಪಯ್ಯ ಅವರು ನೇಮಕಗೊಂಡಿದ್ದಾರೆ.

ಕಾಂಗ್ರೆಸ್‍ನಿಂದ ಆಮಿಷದ ಆಡಿಯೋ ಬಿಡುಗಡೆ

ಬೆಂಗಳೂರು, ಮೇ 18: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶ್ವಾಸಮತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶತಾಯಗತಾಯ ನಾಳಿನ ವಿಶ್ವಾಸಮತ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನೇರವಾಗಿ ಅಖಾಡಕ್ಕಿಳಿದಿದ್ದು, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಅವರಿಗೆ ಆಮಿಷ ಒಡ್ಡಿದ ಆಡಿಯೋವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಅವರು, ಕಾಂಗ್ರೆಸ್ ಶಾಸಕರಿಗೆ ಜನಾರ್ದನ ರೆಡ್ಡಿ ಆಮಿಷ ಒಡ್ಡಿದ ಆಡಿಯೋ ಇದು ಕೇವಲ ಸ್ಯಾಂಪಲ್ ಮಾತ್ರ. ಕೇಂದ್ರ ಬಿಜೆಪಿ ನಾಯಕರೂ ಸಹ ಇದೆ ವಾಮಮಾರ್ಗದಿಂದ ಬಹುಮತ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಾಯಕರು ನಿನ್ನೆವರೆಗೆ 25 ಕೋಟಿ ರುಪಾಯಿಯ ಆಮಿಷ ತೋರಿಸುತ್ತಿದ್ದರು. ಇಂದು ಹಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ 150 ಕೋಟಿ ರೂಪಾಯಿ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿದರು. ತಮಗೆ ಕುದುರೆ ವ್ಯಾಪಾರ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೆಂಬಲ ಇದೆ ಎಂದು ರೆಡ್ಡಿ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಕ್ಕೆ ಕೋರ್ಟ್ ನೋಟಿಸ್

ನವದೆಹಲಿ, ಮೇ 18: ಜಮ್ಮು ಮತ್ತು ಕಾಶ್ಮೀರದ ಕತುವಾ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಫೇಸ್ ಬುಕ್, ಟ್ವೀಟರ್, ಗೂಗಲ್ ಹಾಗೂ ಇತರ ಸಾಮಾಜಿಕ ತಾಣಗಳಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಕೋರ್ಟ್ ಟ್ವೀಟರ್, ಗೂಗಲ್ ಹಾಗೂ ಫೇಸ್‍ಬುಕ್‍ನ ಭಾರತೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ತಾ. 29ಕ್ಕೆ ಮುಂದೂಡಿದೆ. ಕತುವಾ ಅತ್ಯಾಚಾರ ಸಂತ್ರಸ್ತೆಯ ಚಿತ್ರ ಪ್ರಕಟಿಸಿದ್ದ ಮಾಧ್ಯಮಗಳಿಗೆ ಕೋರ್ಟ್ ರೂ. 10 ಲಕ್ಷ ದಂಡ ವಿಧಿಸಿತ್ತು. ಅಲ್ಲದೆ ಸಂತ್ರಸ್ತೆಯ ವಿವರ ಬಹಿರಂಗಪಡಿಸಿದೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಕಳೆದ ಜನವರಿಯಲ್ಲಿ ಕತುವಾದ 8 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಲಾಗಿತ್ತು.

ಹತ್ಯೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕೊಚ್ಚಿ, ಮೇ 18: ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಯುವ ಕಾಂಗ್ರೆಸ್ ನಾಯಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಸಿಬಿಐ ವಿಶೇಷ ಕೋರ್ಟ್ ಇಬ್ಬರು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಅಲ್ಲದೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. 2001ರಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಯುವ ಕಾಂಗ್ರೆಸ್ ಬಾಲಕೃಷ್ಣನ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಧೀಶ ಎಸ್. ಸಂತೋಷ್ ಕುಮಾರ್ ಅವರು, ಅಪರಾಧಿಗಳಾದ ಮೊಹಮ್ಮದ್ ಇಖ್ಬಾಲ್ ಅಲಿಯಾಸ್ ಇಕ್ಕು, ಹಾಗೂ ಮೊಹಮ್ಮದ್ ಹನೀಫ್ ಅಲಿಯಾಸ್ ಜ್ಯಾಕಿ ಹನೀಫ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಇತರ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ದಂಡದ ಹಣವನ್ನು ಬಾಲಕೃಷ್ಣನ್ ಅವರ ತಂದೆ ಗೋಪಾಲನ್ ಅವರಿಗೆ ನೀಡಬೇಕು ಎಂದು ಸಿಬಿಐ ಕೋರ್ಟ್ ಆದೇಶಿಸಿದೆ.

ವಿಶ್ವನಾಥ್ ಪುತ್ರ ಪೂರ್ವಜ್ ಅಸಮಾಧಾನ

ಮೈಸೂರು, ಮೇ 18: ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ ಆದೇಶ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪರ ತೀವ್ರವಾಗಿದ್ದು, ಇದಕ್ಕೆ ಇಂಬು ನೀಡುವಂತೆ ಜೆಡಿಎಸ್ ಮುಖಂಡ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಫೇಸ್‍ಬುಕ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಕುದುರೆ ವ್ಯಾಪರ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹುಣಸೂರು ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್, ಇದೆಲ್ಲವೂ ನಮ್ಮ ಬಳಿ ನಡೆಯುವದಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಪ್ರಕಟಿಸಿದ್ದಾರೆ. ಕುದುರೆ ವ್ಯಾಪಾರವೆಲ್ಲ ಹೆಚ್. ವಿಶ್ವನಾಥ್ ಅವರ ಬಳಿ ನಡೆಯುವದಿಲ್ಲ. ನಾವು ಪಕ್ಷ ನಿಷ್ಠರು, ಅವಕಾಶವಾದಿಗಳಲ್ಲ. ನಮ್ಮ ತಂದೆಯನ್ನು ಸೆಳೆಯಲು ನನ್ನ ಮೂಲಕ ಪ್ರಯತ್ನ ನಡೆಸುತ್ತಿರುವವರು ಇದನ್ನೆಲ್ಲ ನಿಲ್ಲಿಸಿ. ಅಧಿಕಾರವಿಲ್ಲದಿದ್ದರೂ ಸರಿಯೇ, ಮತ ನೀಡಿದ ಜನರ ಪರ ಶಾಸಕನಾಗಿ ನಿಲ್ಲುವದೇ ಸರಿ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಮೋದಿ ಭೇಟಿ : ಕಣಿವೆಯಲ್ಲಿ ಹೈಅಲರ್ಟ್

ಶ್ರೀನಗರ, ಮೇ 18: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಶ್ರೀನಗರ ಮತ್ತು ಜಮ್ಮುವಿನ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಒಳ ಬರುವ ಮತ್ತು ಹೊರ ಹೋಗುವ ಎಲ್ಲಾ ವಾಹನಗಳನ್ನು ಪೆÇಲೀಸರು ಹಾಗೂ ಸಿಆರ್‍ಪಿಎಫ್ ಸಿಬ್ಬಂದಿ ತೀವ್ರ ತಾಪಸಣೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸೇನೆ ಬಾಹ್ಯ ಭದ್ರತೆಯನ್ನು ಒದಗಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ನಾಳೆ ಕಾಶ್ಮೀರದ ಬಂಡಿಪೆÇೀರಾ ಜಿಲ್ಲೆಯಲ್ಲಿ 330 ಮೇಗಾ ವ್ಯಾಟ್ ಸಾಮಥ್ರ್ಯದ ಕಿಶೆಂಗಾಂಗಾ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಅಪ್ರಚೋದಿತ ಧಾಳಿಗೆ ಯೋಧ ಬಲಿ

ಜಮ್ಮು-ಕಾಶ್ಮೀರ, ಮೇ 18: ಜಮ್ಮು ಮತ್ತು ಕಾಶ್ಮೀರದ ಆರ್‍ಎಸ್‍ಪುರ ಸೆಕ್ಟರ್ ಬಳಿಕ ಪಾಕಿಸ್ತಾನ ಉದ್ಧಟತನ ಪ್ರದರ್ಶಿಸಿದ್ದು, ಅಪ್ರಚೋದಿತ ಗುಂಡಿನ ಧಾಳಿಗೆ ಗಡಿ ಭದ್ರತಾ ಸಿಬ್ಬಂದಿಯೂ ಸೇರಿದಂತೆ ಒಟ್ಟು 5 ಜನರು ಸಾವನ್ನಪ್ಪಿದ್ದಾರೆ. ಆರ್‍ಎಸ್‍ಪುರ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ಧಾಳಿ ನಡೆಸಿದ್ದು, ಈ ವೇಳೆ ಸೀತಾರಾಮ್ ಉಪಾಧ್ಯಾಯ ಎಂಬ ಬಿಎಸ್‍ಎಫ್ ಯೋಧ ಹುತಾತ್ಮರಾಗಿದ್ದಾರೆಂದು ವರದಿಗಳು ತಿಳಿಸಿವೆ. ಸೀತಾರಾಮ್ ಉಪಾಧ್ಯಾಯ ಅವರು ಜಾರ್ಖಾಂಡ್ ಮೂಲದವರಾಗಿದ್ದು, 1 ವರ್ಷದ ಪುತ್ರ ಹಾಗೂ 3 ವರ್ಷಗ ಪುತ್ರಿಯನ್ನು ಅಗಲಿದ್ದಾರೆ. ಪಾಕಿಸ್ತಾನದ ಆಪ್ರಚೋದಿತ ಗುಂಡಿನ ಧಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.