ಮಡಿಕೇರಿ, ಮೇ 19: ಮತಯಾಚನೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯನ್ನು ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯೆ ಸಂಹಿತೆ (ತಿದ್ದುಪಡಿ) 2005ರ ಸೆಕ್ಷನ್ 144(ಎ) ರಡಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕೊಡಗು ಜಿಲ್ಲೆಯಾದ್ಯಂತ ತಾ. 19ರ ಮಧ್ಯಾಹ್ನ 1 ಗಂಟೆಯಿಂದ ತಾ. 20ರ ಮಧ್ಯಾಹ್ನ 1 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಚೇರಿ ಸುತ್ತಮುತ್ತ ಗುಂಪು ಸೇರುವದನ್ನು ಅಥವಾ ಗುಂಪು ಕೂಡುವದನ್ನು ನಿಷೇಧಿಸಿದೆ.ಯಾವದೇ ಆಯುಧ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವದೇ ವಸ್ತುಗಳನ್ನು ಹಿಡಿದು ಓಡಾಡುವಂತಿಲ್ಲ.ಯಾವದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ / ರಾಜಕೀಯ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.ಪಟಾಕಿ ಮಾರಾಟ, ಪಟಾಕಿಗಳನ್ನು ಸಿಡಿಸುವದು ಮತ್ತು ಬಿಡಿ ಪೆಟ್ರೋಲ್ ಮಾರಾಟ ಮಾಡುವದು ಮತ್ತು ಯಾವದೇ ಸ್ಫೋಟಕ ವಸ್ತುಗಳನ್ನು ಹೊಂದುವದನ್ನು ನಿಷೇಧಿಸಲಾಗಿದೆ.
ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವದಿಲ್ಲ ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಣೆ ವೇಳೆ ಲಾಠಿಗಳನ್ನು ಉಪಯೋಗು ಸುವದಕ್ಕೆ ಅನ್ವಯಿಸುವದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.