ಮಡಿಕೇರಿ, ಮೇ 19 : ತಲಕಾವೇರಿ ಕ್ಷೇತ್ರದಲ್ಲಿರುವ ಲೋಪದೋಷಗಳನ್ನು ತಿಳಿದು ಅದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಾ. 21ರಿಂದ 24ರವರಗೆ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಹಂತಹಂತವಾಗಿ ಕಾರ್ಯಯೋಜನೆ ರೂಪಿಸಲಾಗುವದು ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 20ರಂದು (ಇಂದು) ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದ್ದು, ಅದರ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 11.30 ಗಂಟೆಯಿಂದ ಕಲಶಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿ ಅವರ ಉಪಸ್ಥಿತಿಯಲ್ಲಿ ಈ ದೇವತಾ ಕಾರ್ಯಗಳು ನಡೆಯಲಿವೆ ಎಂದು ವಿವರಿಸಿದರು.ತಾ. 21ರಿಂದ 24ರವರೆಗೆ ಕ್ಷೇತ್ರದ ತಂತ್ರಿಗಳ ಉಪಸ್ಥಿತಿಯಲ್ಲಿ ಕೇರಳದ ಪಯ್ಯನೂರಿನ ಎ.ವಿ.ನಾರಾಯಣ ಪೊದುವಾಳ್ ಮತ್ತು ತಂಡದವರಿಂದ ಅಷ್ಟಮಂಗಲ ಪ್ರಶ್ನೆ ನಡೆಯಲಿದ್ದು, ಪ್ರಶ್ನೆಯಲ್ಲಿ ಕಂಡು ಬರುವ ದೋಷಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವದು. ಈ ಹಿನ್ನೆಲೆಯಲ್ಲಿ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ಹೊಂದಿರುವ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಈ ಅಷ್ಟಮಂಗಲ ಪ್ರಶ್ನೆಯಲ್ಲಿ ಭಾಗಿಯಾಗಿ ತಮಗಿರುವ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ತಮ್ಮಯ್ಯ ತಿಳಿಸಿದರು.

ನೂತನ ವ್ಯವಸ್ಥಾಪನಾ ಸಮಿತಿ ಕಳೆದ ಫೆಬ್ರವರಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆ ಬಳಿಕ ಸಮಿತಿಯು ಮೂರು ಸಭೆಗಳನ್ನು ನಡೆಸುವ ಮೂಲಕ ಹಲವು ವಿಚಾರಗಳ ಬಗ್ಗೆ ತೀರ್ಮಾನ ಕೈಗೊಂಡಿದೆ. ಪ್ರಮುಖವಾಗಿ ಕ್ಷೇತ್ರದಲ್ಲಿ ಶುಚಿತ್ವ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾವೇರಿ ನದಿಯನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಪಿಂಡ ಪ್ರದಾನ ಮಾಡುವ ಸಂದರ್ಭ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭ ನೀರಿನಲ್ಲಿ ಸಂಗ್ರಹವಾಗುವ ಬಾಳೆಎಲೆ, ಹೂವು ಮತ್ತಿತರ ತ್ಯಾಜ್ಯವನ್ನು ತಕ್ಷಣ ತೆಗೆಯಲು ಪರಿಣಿತರನ್ನು ನೇಮಕ ಮಾಡಲಾಗಿದೆ.ಅಲ್ಲದೆ ಪಿಂಡ ಪ್ರದಾನ ಮಾಡುವ ಸಂದರ್ಭ ಅಸ್ಥಿಯ ಭಸ್ಮವನ್ನು ಸಾಂಕೇತಿಕವಾಗಿ ಮಾತ್ರ ನಿಗದಿತ ಸ್ಥಳದಲ್ಲಿ ವಿಸರ್ಜಿಸಲು ಅವಕಾಶ ಕಲ್ಪಿಸಿದ್ದು, ಉಳಿದ ಭಸ್ಮವನ್ನು ಗುಂಡಿಯೊಂದರಲ್ಲಿ ಹಾಕಲು ಕ್ರಮಕೈಗೊಳ್ಳಲಾಗಿದೆ. ಕೇಶಮುಂಡನದ ಸ್ಥಳವನ್ನು ಸಂಗಮದ ಮತ್ತೊಂದು ದಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಭಾಗಮಂಡಲಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು ಸಂಗಮದ ಬಳಿ ಅಡುಗೆ ಮಾಡಿ ಕ್ಷೇತ್ರದ ಶುಚಿತ್ವ ಮತ್ತು ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುವದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದ ಅವರು, ಭಾಗಮಂಡಲದ ಕ್ಷೇತ್ರದಲ್ಲಿ ಸೋರುತ್ತಿದ್ದ ಶ್ರೀ ಸುಬ್ರಹ್ಮಣ್ಯ ಗುಡಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ

(ಮೊದಲ ಪುಟದಿಂದ) ಪೌಳಿ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಭಾಗಮಂಡಲ ಪಟ್ಟಣದ ತ್ಯಾಜ್ಯ ಹಾಗೂ ಕಲ್ಮಶಗಳು ಕಾವೇರಿ ನದಿ ಸೇರುವದನ್ನು ತಡೆಯುವ ನಿಟ್ಟಿನಲ್ಲಿ ಒಳ ಚರಂಡಿ ನಿರ್ಮಾಣಕ್ಕೆ 20014ರಲ್ಲಿ 4.50ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪುಗೊಂಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಈ ಕ್ರಿಯಾ ಯೋಜನೆಯನ್ನು ಪರಿಷ್ಕರಿಸುವಂತೆ ಜಿಲ್ಲಾಡಳಿತದ ಮೂಲಕ ಒಳಚರಂಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಒಳಗಾಗಿ ಈ ಕಾರ್ಯಕ್ರಮ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವದು ಎಂದು ತಮ್ಮಯ್ಯ ವಿವರಿಸಿದರು.

ದೇವಾಲಯಕ್ಕೆ ಸಂಬಂಧಿಸಿದಂತೆ ಕ್ಷೇತ್ರದಿಂದ ಸುಮಾರು 2.50 ಕಿ.ಮೀ ದೂರದ ತಾವೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗವಿದ್ದು, ಇಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ, ಶೌಚಾಲಯ, ಅಡುಗೆ ಕೋಣೆ ಮತ್ತಿತರ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸುಮಾರು 4 ಎಕರೆ ಜಾಗದಲ್ಲಿ ಅಂದಾಜು 3 ಕೊಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ನುಡಿದರು. ದೇವಾಲಯದ ಪುನರ್‍ಪ್ರತಿಷ್ಠಾಪನೆಯಾಗಿ 12 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಡಿಸೆಂಬರ್ ವೇಳೆಗೆ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಚಿಂತನೆಯಿದ್ದು, ಈ ಹಿಂದೆ ಪುನರ್‍ಪ್ರತಿಷ್ಠಾಪನೆ ಸಂದರ್ಭ ದೇವಾಲಯದ ಅಭಿವೃದ್ಧಿಗೆ ದುಡಿದ ಮಹನೀಯರನ್ನು ಒಳಗೊಂಡು ಇದಕ್ಕಾಗಿ ಸಮಿತಿಯನ್ನು ರಚಿಸಲಾಗುವದು ಎಂದು ಅವರು ತಿಳಿಸಿದರು.

ತಲಕಾವೇರಿಯಲ್ಲೂ ಸ್ನಾನಕೊಳ ಹಾಗೂ ತೀರ್ಥಕುಂಡಿಕೆಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೇವಲ ಪೂಜೆ ಮಾಡುವವರಿಗೆ ಮಾತ್ರ ತೀರ್ಥಕೊಳಕ್ಕೆ ಇಳಿಯಲು ಅವಕಾಶ ಕಲ್ಪಿಸಲಾಗುತ್ತಿದ್ದು, ಉಳಿದವರಿಗೆ ಕೊಳದ ಮೇಲ್ಭಾಗದಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಬ್ರಹ್ಮಗಿರಿಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇದೀಗ ಪ್ರವಾಸಿಗರು ಬೆಟ್ಟವನ್ನು ಏರುವ ಸಂದರ್ಭ ಹಲವು ನಿಯಮಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡು ಕಡೆಗಳಲ್ಲಿ ತಪಾಸಣಾ ಗೇಟ್‍ಗಳನ್ನು ಅಳವಡಿಸಿ, ಮೊಬೈಲ್, ಕ್ಯಾಮರಾ ಮತ್ತಿತರ ವಸ್ತುಗಳನ್ನು ಕ್ಷೇತ್ರಕ್ಕೆ ಹಾಗೂ ಬ್ರಹ್ಮಗಿರಿಗೆ ಒಯ್ಯುವದನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ. ಇದರೊಂದಿಗೆ ಬ್ರಹ್ಮಗಿರಿಯಲ್ಲಿ ಸಪ್ತ ಋಷಿಗಳು ತಪಸ್ಸು ಮಾಡಿದ ಜಾಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ವಿಶೇಷವಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬರುವ ಸಲಹೆಗಳನ್ನು ಆದ್ಯತೆಯಲ್ಲಿ ಪರಿಗಣಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಡಾ|| ಎಸ್.ಎಂ.ಕಾವೇರಪ್ಪ, ಉದಿಯಂಡ ಪಿ. ಸುಭಾಷ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಂ. ಜಗದೀಶ್ ಕುಮಾರ್ ಉಪಸ್ಥಿತರಿದ್ದರು.