ಗೋಣಿಕೊಪ್ಪಲು, ಮೇ 19: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಸಂವಿಧಾನಕ್ಕೆ ವಿಶಿಷ್ಟ ಗೌರವವಿದೆ. ಇಂದು ಜನತೆ ಮಾದ್ಯಮ ಹಾಗೂ ನ್ಯಾಯಾಂಗ ಮೇಲೆ ಮಾತ್ರ ನಂಬಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್‍ಪೂವಯ್ಯ ಆಶಾಭಾವನೆ ವ್ಯಕ್ತಪಡಿಸಿದರು.ಮೂರು ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಶನಿವಾರ ರಾಜೀನಾಮೆ ನೀಡಿದ ನಂತರ ಪತ್ರಿಕಾ ಹೇಳಿಕೆ ನೀಡಿದ ಸಂಕೇತ್ ಪೂವಯ್ಯ ಜೆಡಿಎಸ್‍ನ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಕರ್ನಾಟಕ, ಹಾಗೂ ಕೊಡಗಿನ ಕಾರ್ಮೋಡದ ದಿನಗಳು ಮಾಯವಾಗಲಿದ್ದು ರೈತನ,ಬಡವನ, ಶ್ರಮಿಕನ ಕಣ್ಣೀರು ಒರೆಸುವ ಸುದಿನ ಆರಂಭವಾಗಲಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಡುವದು ಪ್ರತಿಯೊಬ್ಬನ ಕರ್ತವ್ಯ. ರಾಜ್ಯದಲ್ಲಿ ಕೋಮುವಾದ ಪಕ್ಷವನ್ನು ದೂರ ಇಡಲು ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ನಡೆಸಲಿವೆ. 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ನೀಡಿದ ಜನಪ್ರಿಯ ಆಡಳಿತ ರೀತಿಯಲ್ಲಿಯೇ ರಾಜ್ಯದಲ್ಲಿ ಮುಂದಿನ ಸರ್ಕಾರ ಆಡಳಿತ ನಡೆಸಲಿದೆ.
ರಾಜ್ಯದ ರಾಜ್ಯಪಾಲರು ಏಕರೀತಿಯಲ್ಲಿ ನಡೆದುಕೊಂಡಿರುವದು ಸರಿಯಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನದಟ್ಟು ಮಾಡಿಕೊಡುವ ಮೂಲಕ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಸಂಕೇತ್ ಪೂವಯ್ಯ ಭರವಸೆಯಿತ್ತಿದ್ದಾರೆ.