ಕುಶಾಲನಗರ, ಮೇ 18: ಪ್ರಧಾನಿ ನರೇಂದ್ರ ಮೋದಿ ದೇಶದ ಸಾಂವಿಧಾನಿಕ ಹುದ್ದೆಗಳನ್ನು ತಮ್ಮ ಪಕ್ಷದ ಅಭಿವೃದ್ಧಿಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕುಶಾಲನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜ್ಯಪಾಲ ವಜುಬಾಯಿ ವಾಲ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ರಾಜ್ಯದಲ್ಲಿ ಅಧಿಕಾರ ನಡೆಸಲು ಬೇಕಾದ ಸ್ಪಷ್ಟ ಬಹುಮತ ಯಾವದೇ ಪಕ್ಷಕ್ಕೆ ದೊರೆಯದಿದ್ದರೂ ಬಿಜೆಪಿಗೆ ಅಧಿಕಾರ ನಡೆಸಲು ರಾಜ್ಯಪಾಲರು ಅವಕಾಶ ನೀಡುವ ಮೂಲಕ ತಮ್ಮ ಹುದ್ದೆಯ ಘನತೆಗೆ ಅಗೌರವ ಉಂಟುಮಾಡಿದ್ದಾರೆ ಎಂದರು. ಸ್ಪಷ್ಟ ಬಹುಮತ ದೊರೆಯದ ಸಂದರ್ಭ ಎರಡು ಪಕ್ಷಗಳು ಒಗ್ಗೂಡಿ ಸರಕಾರ ರಚಿಸುವ ಸಂಪ್ರದಾಯಗಳನ್ನು ಗಾಳಿಗೆ ತೂರಲಾಗಿದೆ. ಆದಾಯ ತೆರಿಗೆ ಇಲಾಖೆಯನ್ನು ತಮ್ಮ ವಿರೋಧಿಗಳನ್ನು ಬಗ್ಗುಬಡಿಯಲು ಬಳಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು. ಇಂತಹ ಬೆಳವಣಿಗೆಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ಜನತೆ ದಂಗೆ ಏಳಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಪ.ಪಂ. ಸದಸ್ಯರಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಶಿವಶಂಕರ್, ಹೆಚ್.ಕೆ. ಪಾರ್ವತಿ, ಪ್ರಮುಖರಾದ ಅಬ್ದುಲ್ ಖಾದರ್, ಆರ್.ಕೆ. ನಾಗೇಂದ್ರಬಾಬು, ಕೆ.ಎನ್. ಅಶೋಕ್, ಪ್ರಕಾಶ್ ಮತ್ತಿತರರು ಇದ್ದರು.