ಮಡಿಕೇರಿ, ಮೇ 18 : ಭಾರತೀಯ ಜನತಾ ಪಾರ್ಟಿಯ ವಿಜೇತ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಈ ಬಾರಿ ಕೂಡ ಮಡಿಕೇರಿ ನಗರದ ಮತದಾರರು ಅತ್ಯಧಿಕ ಮತಗಳನ್ನು ನೀಡಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಜೈನಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರದಲ್ಲಿ ಚಲಾವಣೆಯಾದ 16,533 ಮತಗಳಲ್ಲಿ ಅತಿ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದುಕೊಂಡಿದ್ದು, ಮಡಿಕೇರಿ ನಗರ ಬಿಜೆಪಿಯ ಭದ್ರಕೋಟೆ ಎನ್ನುವದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ 7,622 ಮತಗಳನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮತ್ತು ಮಡಿಕೇರಿ ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ 5,992 ಮತಗಳನ್ನು ಪಡೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ನಗರಸಭೆಯ ಕಾಂಗ್ರೆಸ್ ಆಡಳಿತದ ವಿರುದ್ಧ ಮಡಿಕೇರಿ ನಗರದ ಜನತೆ ಮತ ಚಲಾಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು, ಜೆಡಿಎಸ್ ಕೇವಲ 2,919 ಮತಗಳನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಸ್ಪರ್ಧೆ ನಡೆದಿದ್ದು, ನಗರದಲ್ಲಿ ಜೆಡಿಎಸ್‍ಗಿಂತ ಸುಮಾರು 4,703 ಮತಗಳ ಮುನ್ನಡೆಯನ್ನು ಬಿಜೆಪಿ ಪಡೆದುಕೊಂಡಿದೆ. ಈ ಸಾಧನೆಗೆ ಜನಪರ ಕಾರ್ಯಗಳು, ಜನಸಾಮಾನ್ಯರೊಂದಿಗೆ ಶಾಸಕರ ಒಡನಾಟ ಮತ್ತು ನಗರದ ಬಿಜೆಪಿ ಕಾರ್ಯಕರ್ತರ ದುಡಿಮೆಯೇ ಕಾರಣವಾಗಿದೆ ಎಂದು ಹೇಳಿದ್ದಾರೆ.
ನಗರದ ಹದಗೆಟ್ಟ ರಸ್ತೆ, ಚರಂಡಿಗಳು, ಅಶುಚಿತ್ವದ ವಾತಾವರಣ ಸೇರಿದಂತೆ ನಗರಸಭೆಯ ಆಡಳಿತ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಗರ ಬಿಜೆಪಿ ಸತತವಾಗಿ ಹೋರಾಟ, ಧರಣಿಗಳನ್ನು ಮಾಡುತ್ತಾ ಬಂದಿದೆ. ಇದೇ ಕಾರಣಕ್ಕೆ ನಗರದ ಪ್ರಜ್ಞಾವಂತ ಮತದಾರರು ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಮತ ಚಲಾಯಿಸಿದ್ದು, ಎಲ್ಲಾ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಅಭಿನಂದನಾರ್ಹರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.