ಮಡಿಕೇರಿ, ಮೇ 18: ಸುಮಾರು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರು 16 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದನ್ನು ಗಮನಿಸಿದರೆ, ಮತ ಯಂತ್ರದ ಮೇಲೆ ಸಂಶಯ ಮೂಡುತ್ತದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಎ.ಆದಿಲ್ ಪಾಷ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತದಿಂದ ಜೀವಿಜಯ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಜೆಡಿಎಸ್ಗೆ ಇತ್ತಾದರು, ಕೆಲವು ನ್ಯೂನತೆಗಳಿಂದ ಸೋಲಾಗಿದೆ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಪ್ರಬಲಗೊಳಿಸಲಾಗುವದೆಂದು ತಿಳಿಸಿದರು.
ಅಲ್ಪಸಂಖ್ಯಾತರಲ್ಲು ಕಮಲ ಕಾಂಗ್ರೆಸ್ಸಿಗರು ಇದ್ದಾರೆ ಎನ್ನುವುದು ಈ ಚುನಾವಣೆಯಿಂದ ಸಾಬೀತಾಗಿದೆ. ಮುಗ್ದ ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡಲಾಗಿದ್ದು, ಶನಿವಾರಸಂತೆ ವ್ಯಾಪ್ತಿಯನ್ನು ಹೊರತು ಪಡಿಸಿದಂತೆ ಕ್ಷೇತ್ರದ ಯಾವದೇ ಭಾಗದಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ಗೆ ಮತ ನೀಡಲಿಲ್ಲ. ಅಲ್ಪಸಂಖ್ಯಾತರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಜಾತ್ಯತೀತ ಜನತಾದಳ ಸೋಲುವಂತೆ ಮಾಡಲಾಗಿದೆ. ಅಲ್ಪಸಂಖ್ಯಾತರು ಆತ್ಮವಂಚನೆ ಮಾಡಿಕೊಳ್ಳುವದನ್ನು ಬಿಟ್ಟು ಎಲ್ಲರು ಒಗ್ಗಟ್ಟಾಗಿ ನೈಜ ಜಾತ್ಯತೀತ ಪಕ್ಷಕ್ಕೆ ಮತ ನೀಡುವ ನಿರ್ಧಾರ ಕೈಗೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಲೀಲಾ ಶೇಷಮ್ಮ, ಶನಿವಾರಸಂತೆ ಪ್ರಮುಖರಾದ ಕುಸುಮ ಸುಧಾಕರ್, ಕೆ.ಎಸ್ ಚನ್ನಬಸಪ್ಪ, ರಾಜೇಶ್ವರಿ, ನಂದಿನಿ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.