ಶನಿವಾರಸಂತೆ, ಮೇ 18: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಹಸಿರುಮೆಣಸಿನ ಕಾಯಿ ಸಂತೆಗೆ 7 ಲೋಡ್ ಮೆಣಸಿನಕಾಯಿ ಮಾರಾಟಕ್ಕೆ ಬಂದಿತ್ತು. 1 ಕೆ.ಜಿ.ಗೆ ರೂ. 10-11 ಹಾಗೂ 25 ಕೆ.ಜಿ. ಮೆಣಸಿನ ಕಾಯಿ ತುಂಬಿದ ಚೀಲಕ್ಕೆ ರೂ. 250-275 ದರ ದೊರೆತು ರೈತರು ತೀರಾ ಹತಾಶೆ ವ್ಯಕ್ತಪಡಿಸಿದರು.
ಮುಂಜಾನೆಯಿಂದಲೇ ಆರಂಭವಾದ ವ್ಯಾಪಾರ ಬೆಳಿಗ್ಗೆ 9-10 ಗಂಟೆಗೆಲ್ಲ ಮುಗಿದು ವ್ಯಾಪಾರಿಗಳು ಖರೀದಿಸಿದ ಹಸಿರು ಮೆಣಸಿನ ಕಾಯಿಯನ್ನು ಲಾರಿಗಳಲ್ಲಿ ತುಂಬಿಸಿ ಬೆಂಗಳೂರು, ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಹೊರ ರಾಜ್ಯಗಳಿಗೆ ಸಾಗಿಸಿದರು.
ಆಗಾಗ್ಗೆ ಬಿದ್ದ ಉತ್ತಮ ಮಳೆಯಿಂದ ಇಳುವರಿ ಚೆನ್ನಾಗಿ ಬಂದಿದೆ. ಹಸಿರು ಮೆಣಸಿನಕಾಯಿ ಕೊಯ್ದು 2-3 ದಿನ ಮಾತ್ರ ಇಟ್ಟುಕೊಳ್ಳಬಹುದೇ ವಿನಃ ವಾರಗಟ್ಟಲೆ ಸಂಗ್ರಹಿಸಿಡುವಂತಿಲ್ಲ. ಕೊಳೆಯುವ ಸಾಧ್ಯತೆ ಇರುವದರಿಂದ ಸಿಕ್ಕಷ್ಟು ಬೆಲೆಗೆ ಮಾರದೇ ವಿಧಿಯಿಲ್ಲ. ಸಿಗುವ ಹಣ ಕೊಡುವ ಕೂಲಿಗೆ, ಸಾಗಾಟ ವೆಚ್ಚಕ್ಕೆ ಸರಿಯಾಗುತ್ತದೆ. ಲಾಭವಿರಲಿ ಅಸಲೇ ಇಲ್ಲ ಎಂದು ರೈತರಾದ ಕಾಜೂರು ಗ್ರಾಮದ ಕೆ.ಎಂ. ಚಂದ್ರಶೇಖರ್, ಬಿಳಾಹ ಗ್ರಾಮದ ಬಿ.ಎಂ. ಪ್ರಕಾಶ್ ಅಳಲು ತೋಡಿಕೊಂಡರು.
ಕಳೆದೆರಡು ವರ್ಷಗಳಲ್ಲಿ ಉತ್ತಮ ದರ ದೊರೆತ ಪರಿಣಾಮ ಈ ವರ್ಷ ಎಲ್ಲೆಡೆ ರೈತರು ಹಸಿರು ಮೆಣಸಿನ ಕಾಯಿ ಬೆಳೆದರು. ಇಳುವರಿ ಚೆನ್ನಾಗಿ ಬಂದಿತು. ಆಗಾಗ್ಗೆ ಸುರಿದ ಮಳೆಯಿಂದ ಹೊಳೆಗಳಲ್ಲಿ ನೀರಾಗಿ ಗಿಡಗಳಿಗೆ ನೀರಿಗೂ ತೊಂದರೆಯಾಗಲಿಲ್ಲ. ವರ್ಷ ಆರಂಭದಿಂದ 5 ಇಂಚು ಮಳೆಯಾಗಿದೆ. ಗೊಬ್ಬರ ಹಾಕಿ ಗಿಡಗಳಲ್ಲಿ ಕಾಯಿ ಸೊಂಪಾಗಿ ಬೆಳೆಯಿತು. ಅಧಿಕ ಇಳುವರಿ ದರ ಕುಸಿತಕ್ಕೆ ಕಾರಣವಾಯಿತು. ಹಸಿರು ಮೆಣಸಿನಕಾಯಿ ಕೊಯ್ಯಲು ಬರುವ ಗಂಡಾಳಿಗೆ ದಿನಕ್ಕೆ ರೂ. 430, ಹೆಣ್ಣಾಳಿಗೆ ರೂ. 280 ಕೂಲಿ ಕೊಡಬೇಕು. ಜತೆಗೆ ಗೊಬ್ಬರದ ರೇಟು ಜಾಸ್ತಿ. ಹಾಗಾಗಿ ಕೆಲ ರೈತರು ತಾವೇ ಮನೆಮಂದಿಯೆಲ್ಲ ದುಡಿಯುತ್ತಾರೆ. ಆದರೆ ಅದರ ಶ್ರಮಕ್ಕೆ ಬೆಲೆಯೇ ಇಲ್ಲ.