ಮಡಿಕೇರಿ, ಮೇ 18: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗ, ಕರ್ನಾಟಕ ಆರ್ಥೋಪೆಡಿಕ್ಸ್ ಅಸೋಶಿಯೇಷನ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಕೀಲು ಮತ್ತು ಮೂಳೆ ತಜ್ಞರ ಮುಂದುವರಿಕಾ ವೈದ್ಯಕೀಯ ಶಿಕ್ಷಣ ಎಂಬ ಕಾರ್ಯಕ್ರಮವನ್ನು ತಾ. 19 ಮತ್ತು 20 ರಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ತಾ. 19 ರಂದು (ಇಂದು) ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 11 ಗಂಟೆಗೆ ನಡೆಯುವದು. ಕರ್ನಾಟಕ ರಾಜ್ಯದಾದ್ಯಂತ ಸುಮಾರು 250 ವೈದ್ಯರುಗಳು, ಈ ಎರಡು ದಿನಗಳ ವೈದ್ಯಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ವೈದ್ಯಕೀಯ ಮಂಡಳಿಯು ಈ ಕಾರ್ಯಕ್ರಮವನ್ನು ಅಂಗೀಕರಿಸಿ ಮೂರು ಗಂಟೆಗಳ ಅಧಿಕೃತ ಮುಂದುವರಿಕಾ ವೈದ್ಯಕೀಯ ಶಿಕ್ಷಣ ಅವಧಿಯನ್ನು ನೀಡಲೊಪ್ಪಿರುತ್ತದೆ.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯದಾದ್ಯಂತ ಹೆಸರಾಂತ ಇಪ್ಪತ್ತು ತಜ್ಞ ವೈದ್ಯರುಗಳು ಆಗಮಿಸುತ್ತಿದ್ದಾರೆ. ಇವರುಗಳು ಕೀಲು ಮತ್ತು ಮೂಳೆಗಳ ವಿಷಯವಾಗಿ ಸುದೀರ್ಘವಾದ ವಿವರಣೆ ಮತ್ತು ನೂತನ ಚಿಕಿತ್ಸಾ ವಿಧಾನಗಳ ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.