ಮಡಿಕೇರಿ, ಮೇ 19: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಚಂಡಿಕಾ ಯಾಗದೊಂದಿಗೆ ನಿನ್ನೆ ಮತ್ತು ಇಂದು ವಿಶೇಷ ಪೂಜೆ, ಅನ್ನದಾನ ನೆರವೇರಿತು. ಈ ಪ್ರಯುಕ್ತ ನಿನ್ನೆ ರಾತ್ರಿ ಧಾರ್ಮಿಕ ಸಭೆ ಏರ್ಪಡಿಸಲಾಗಿತ್ತು.
ದೇವಾಲಯದ ಅರ್ಚಕ ಮಹಾಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಗ್ರಂಥಗಳು ಮನುಕುಲದ ಕಲ್ಯಾಣಕ್ಕೆ ಎಲ್ಲಾ ರೀತಿ ಮಾರ್ಗದರ್ಶನ ನೀಡಿವೆ ಎಂದು ಅವರು ಪ್ರತಿಪಾದಿಸಿದರು.
ಹೀಗಿದ್ದೂ ಕೆಲವರು ಧರ್ಮಗಳ ನಡುವೆ, ಮತ ಸಂಪ್ರದಾಯಗಳಲ್ಲಿ ಹಾಗೂ ಜನಾಂಗೀಯ ಸಂಘರ್ಷಕ್ಕೆ ಯತ್ನಿಸುತ್ತಿದ್ದು, ಈ ಬಗ್ಗೆ ಎಲ್ಲಾ ಧರ್ಮಾನುಯಾಯಿಗಳು ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು. ಪಶು, ಪ್ರಾಣಿಗಳಿಂದಲೂ ಉಪಕಾರ ಪಡೆಯುವ ಮನುಷ್ಯ ಅವುಗಳ ಬಗ್ಗೆ ಅಸಡ್ಡೆ ತೋರಬಾರದೆಂದು ತಿಳಿ ಹೇಳಿದರು.
ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತಾ, ಅನ್ಯಾಯವನ್ನು ಪ್ರತಿಭಟಿಸುವ ದಿಸೆಯಲ್ಲಿ ಸಮಾಜ ಸಾಗಿಸುವಂತಾದರೆ ಎಲ್ಲರ ಕಲ್ಯಾಣದೊಂದಿಗೆ ಭಗವಂತನಲ್ಲಿ ಭಯ, ಭಕ್ತಿಯೊಂದಿಗೆ ಶಾಂತಿ, ನೆಮ್ಮದಿಯ ಬದುಕು ಸಾಧ್ಯವೆಂದು ನೆನಪಿಸಿದರು.
ದೇವಾಲಯ ಹಾಗೂ ಅನ್ನಪೂರ್ಣೇಶ್ವರಿ ಪ್ರತಿಷ್ಠಾನದಿಂದ ಈ ಸಂದರ್ಭ ಹಿರಿಯ ಕಲಾವಿದರಾದ ಚೌರೀರ ತಿಮ್ಮಯ್ಯ ಹಾಗೂ ವಿ.ಟಿ. ಶ್ರೀನಿವಾಸ್ ಇವರುಗಳನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರುಗಳು ಆಶಯ ನುಡಿಯಾಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಅರ್ಚಕ ಮಹಾಬಲೇಶ್ವರ ಭಟ್, ಸಮಾಜದಲ್ಲಿ ಡಂಬಾಚಾರ ವಿರುದ್ಧ ದಿಕ್ಕಿನಲ್ಲಿ ಹೋರಾಡುವ ಜಾಯಮಾನ ತನ್ನದೆಂದು ಪ್ರತಿಪಾದಿಸುತ್ತಾ, ಸನ್ಮಾರ್ಗದಲ್ಲಿ ಎಲ್ಲರೂ ಸಾಗುವ ಆಂದೋಲನದ ಅಗತ್ಯವನ್ನು ನೆನಪಿಸಿದರು.
ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಶಾಲೆಯ ಮಕ್ಕಳಿಂದ ಗಮನಾರ್ಹ ನೃತ್ಯ ರೂಪಕಗಳು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು. ಶಿಕ್ಷಕಿ ಹೇಮಾವತಿ ಕಾಂತರಾಜ್ ನೇತೃತ್ವದಲ್ಲಿ ಕಾರ್ಯಕ್ರಮ ಕಣ್ಮನ ಸೆಳೆಯಿತು. ದೇವಾಲಯದ ಮುಖ್ಯಸ್ಥೆ ಗ್ರೇಸಿ ವಿಜಯ, ಮಹಿಳಾ ಸಂಘದ ಪದಾಧಿಕಾರಿಗಳಾದ ಮಮತಾ, ಯಶೋಧ, ಶುಭ ಲವಕುಮಾರ್ ಸೇರಿದಂತೆ ಭಕ್ತ ಸಮೂಹ ಕಾರ್ಯಕ್ರಮ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು.
ಇಂದು ಸನ್ನಿಧಿಯಲ್ಲಿ ವಿಶೇಷವಾಗಿ ಚಂಡಿಕಾ ಯಾಗದೊಂದಿಗೆ ಪೂಜಾ ಕೈಂಕರ್ಯ, ಅನ್ನದಾನ ಸೇವೆಗಳು ನೆರವೇರಿತು.