ಗೋಣಿಕೊಪ್ಪ ವರದಿ, ಮೇ 20 : ಹಾತೂರು ಪ್ರಾಥಮಿಕ ಶಾಲಾ ಮೈದಾನದಲ್ಲಿ ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ನಡೆದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಸೀನಿಯರ್ ವಿಭಾಗದಲ್ಲಿ ಹಾತೂರು ತಂಡ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಹಾತೂರು ತಂಡ ಒಂಟಿಯಂಗಡಿ ತಂಡದ ವಿರುದ್ಧ ಜಯಗಳಿಸಿ 20 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಒಂಟಿಯಂಗಡಿ ತಂಡ 5 ಓವರ್ ಗಳಲ್ಲಿ 26 ರನ್ ಗಳಿಸಿತು. ಹಾತೂರು ತಂಡ 2 ಓವರ್‍ಗಳಲ್ಲಿ ಗುರಿತಲಪಿ ವಿಜಯ ಪತಾಕೆ ಹಾರಿಸಿತು. ಹಾತೂರು ತಂಡದ ಪರವಾಗಿ ಭವಿನ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಸುಲಭ ಜಯಕ್ಕೆ ಕಾರಣವಾದರು.

ಜೂನಿಯರ್ ವಿಭಾಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಿತಿಮತಿ ತಂಡ ಕೋತೂರು ತಂಡದ ವಿರುದ್ದ ಗೆಲುವು ಸಾಧಿಸಿತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಕಣ್ಣಂಗಾಲ ತಂಡ ಕೈಕೇರಿ ತಂಡದ ವಿರುದ್ಧ ಜಯಗಳಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಾತೂರು ತಂಡದ ಭವಿನ್ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಒಂಟಿಯಂಗಡಿ ತಂಡದ ಅಶ್ವಿನ್ ಪಡೆದುಕೊಂಡರು.ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ವಿ.ಎನ್ ಮಹೇಶ್, ಟ್ರೋಫಿ ದಾನಿಗಳಾದ ವಿ.ಜೆ ದಿನೇಶ್, ವಿ.ಇ ವಸಂತ್, ವಿ.ಎನ್ ಪ್ರಸನ್ನ ಹಾಗೂ ಜಿ. ಭವಿನ್ ಇದ್ದರು.