ಮಡಿಕೇರಿ, ಮೇ 20: ಬಿಗ್‍ಬಾಸ್ ಖ್ಯಾತಿಯ ಕ್ರಿಕೆಟ್ ಆಟಗಾರ ಹಾಗೂ ಖ್ಯಾತತಾರೆ ಪ್ರೇಮಾ ಸಹೋದರ ಅಯ್ಯಪ್ಪ ಮತ್ತು ಕರ್ವ ಸಿನಿಮಾ ಖ್ಯಾತಿಯ ನಟಿ ಅನು ಪೂವಮ್ಮ ಇವರುಗಳಿಗೆ ಕಂಕಣ ಭಾಗ್ಯಕ್ಕೆ ಮುಹೂರ್ತ ನಿಶ್ಚಯಗೊಂಡಿದೆ.
ಬೆಂಗಳೂರು ವಸಂತನಗರ ಕೊಡವ ಸಮಾಜದಲ್ಲಿ ತಾ. 13 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತು. ಕೊಡಗು ಮೂಲದ ನೆರವಂಡ ಕುಟುಂಬದ ಅಯ್ಯಪ್ಪ ಹಾಗೂ ಮಾಳೇಟಿರ ಕುಟುಂಬದ ಅನುಪೂವಮ್ಮ ಪರಸ್ಪರ ಪ್ರೇಮಿ ಗಳಾಗಿದ್ದರು ಎಂದು ಗೊತ್ತಾಗಿದೆ. ಆ ಮೇರೆಗೆ ಉಭಯ ಕುಟುಂಬದ ಹಿರಿಯರ ಒಪ್ಪಿಗೆ ಯೊಂದಿಗೆ ನಿಶ್ಚಿತಾರ್ಥ ನಡೆದಿದ್ದು, ವಿವಾಹ ಸಮಾರಂಭವು ಭವಿಷ್ಯದಲ್ಲಿ ಜಿಲ್ಲೆಯಲ್ಲೇ ನಡೆಯಲಿದೆ.
ಕನ್ನಡದ ಖ್ಯಾತ ನಟಿ ಪ್ರೇಮಾ ಅವರ ಸಹೋದರ ಅಯ್ಯಪ್ಪ ಹಾಗೂ ನಟಿ ಅನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬದ ಒಪ್ಪಿಗೆ ಪಡೆದು ಸಪ್ತಪದಿ ತುಳಿಯಲು ಸಜ್ಜಾಗಿದೆ. ಬಿಗ್‍ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರುವ ಕ್ರಿಕೆಟಿಗ ಅಯ್ಯಪ್ಪ, ಕೊಡಗು ಮೂಲದ ಕನ್ನಡದ ಖ್ಯಾತ ನಟಿ ಪ್ರೇಮಾ ಅವರ ಸಹೋದರ ಎನ್ನುವದು ವಿಶೇಷ.
ಬೆಂಗಳೂರಿನ ಕೊಡವ ಸಮಾಜದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಈ ಸಂದರ್ಭದಲ್ಲಿ ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು. ಅಯ್ಯಪ್ಪ ಹಾಗೂ ಅನು ಜೋಡಿ ಪರಸ್ಪರ ಉಂಗುರ ಬದಲಿಸಿಕೊಂಡು ಅಧಿಕೃತ ಜೋಡಿ ಆಗಿದ್ದಾರೆ. ಮುಂದಿನ ವರ್ಷ ಕೊಡಗಿನ ವೀರಾಜಪೇಟೆಯಲ್ಲಿ ಮದುವೆಯಾಗಲಿದ್ದಾರೆ.