ಶನಿವಾರಸಂತೆ, ಮೇ 20: ಸಾರ್ವಜನಿಕರಲ್ಲಿ ಶಾಂತಿ ಕದಡುವ ಪ್ರವೃತ್ತಿ ಹೊಂದಿದ್ದು, ಹಾಗೂ ಸಾಕ್ಷಿದಾರರನ್ನು ಹೆದರಿಸಿ ಸಾಕ್ಷಿ ನುಡಿಯಲು ಬಾರದಂತೆ ನೋಡಿಕೊಳ್ಳುವ ಹಾಗೂ ಚುನಾವಣಾ ಶಾಂತಿ ಕದಡುವ ಸಂಭವ ಪರಿಗಣಿಸಿ ಮುಚ್ಚಳಿಕೆ ಬರೆದು ಸಲ್ಲಿಸಿದ್ದರೂ ಸಹ ಆರೋಪಿಯೊಬ್ಬನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕೋರಿಕೆಯಂತೆ ಕೊಡಗು ಜಿಲ್ಲೆಯಿಂದ 1 ತಿಂಗಳವರೆಗೆ ಗಡಿಪಾರು ಮಾಡುವದು ಸೂಕ್ತ ಎಂದು ಪರಿಗಣಿಸಿ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಅಲ್ಲಿನ ಪೊಲೀಸ್ ಠಾಣೆಗೆ ಹಾಜರುಪಡಿಸಿ ವರದಿ ಸಲ್ಲಿಸಲು ತಿಳಿಸಿ ಮಡಿಕೇರಿಯ ಉಪ ವಿಭಾಗೀಯ ದಂಡಾಧಿಕಾರಿ ಹಾಗೂ ವಿಭಾಗಾಧಿಕಾರಿ ರಮೇಶ್ ಪಿ. ಕೋನರೆಡ್ಡಿ ಶನಿವಾರಸಂತೆ ಪೊಲೀಸ್ ಉಪ ನಿರೀಕ್ಷಕರಿಗೆ ಆದೇಶಿಸಿದ್ದಾರೆ. ಆದರೆ, ಆರೋಪಿ ತಲೆಮರೆಸಿಕೊಂಡಿರುತ್ತಾನೆ.

ಆರೋಪಿ ಸಮೀಪದ ಕೊಡ್ಲಿಪೇಟೆ ಹೋಬಳಿಯ ದೊಡ್ಡಕುಂದ ಗ್ರಾಮದ ಜೆ.ಕೆ. ತೇಜಕುಮಾರ್. ಈತ ಒಂದು ಕೋಮಿನ ಸ್ಥಳೀಯ ಕೆಲ ಹುಡುಗರು ಗುಂಪು ಕಟ್ಟಿಕೊಂಡು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತಮುತ್ತಲು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾ ಜನರ ಆಸ್ತಿಪಾಸ್ತಿಗೆ ಹಾಗೂ ಪ್ರಾಣಕ್ಕೆ ಕುತ್ತು ತರುವಂತಹ ಕೃತ್ಯಗಳನ್ನು ಮಾಡುತ್ತಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 11 ಕ್ರಿಮಿನಲ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.