ಮಡಿಕೇರಿ, ಮೇ. 20: ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ, ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಂಡು ಸರಕಾರಿ ಕಿರಿಯ ಹಾಗೂ ಹಿರಿಯ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿರುವ ಆತಂಕಕಾರಿ ಬೆಳವಣಿಗೆ ಗೋಚರಿಸಿದೆ. ಒಂದೆಡೆ ಸರಕಾರದಿಂದ ಪ್ರೌಢಶಾಲಾ ಹಂತದ ತನಕ ಶುಲ್ಕ ರಹಿತ ಬಹಳಷ್ಟು ಸೌಲಭ್ಯಗಳೊಂದಿಗೆ ವಿದ್ಯೆಗೆ ಪ್ರೋತ್ಸಾಹಿಸುತ್ತಿದ್ದರೂ, ಗ್ರಾಮೀಣ ವಿದ್ಯಾರ್ಥಿಗಳು ಸ್ಪಂದಿಸದಿರುವದು ಬೆಳಕಿಗೆ ಬಂದಿದೆ.
ಇನ್ನೊಂದೆಡೆ ಸರಕಾರದಿಂದ ಉಚಿನ ಶಿಕ್ಷಣ, ಊಟ, ಪಾದರಕ್ಷೆ, ಬೈಸಿಕಲ್ ಇತ್ಯಾದಿಯೊಂದಿಗೆ ಸಮವಸ್ತ್ರವನ್ನು ಕೂಡ ಉಚಿತವಾಗಿ ನೀಡುವದರೊಂದಿಗೆ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವೂ ಘೋಷಿಸಲ್ಪಟ್ಟಿದೆ. ಈ ಎಲ್ಲಾ ಸೌಕರ್ಯಗಳು ಇದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಶಾಲೆಗಳು ಮುಚ್ಚಿ ಹೋಗಿವೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಂತಳ್ಳಿ ಹೋಬಳಿ ಸರಕಾರಿ ಅನುದಾನಿತ ಪ್ರೌಢಶಾಲೆಯೊಂದು ಕೂಡ ಮುಚ್ಚಿ ಹೋಗುವಂತಾಗಿದೆ. ಕಳೆದ 2011-12ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಇದುವರೆಗಿನ 2017-18ರ ಹೊಸ್ತಿಲಿಗೆ ಜಿಲ್ಲೆಯ ಗ್ರಾಮೀಣ ಭಾಗಗಳ 18 ಶಾಲೆಗಳು ಬಾಗಿಲು ಮುಚ್ಚಲ್ಪಟ್ಟಿರುವದು ಅಧಿಕೃತ ಮೂಲಗಳಿಂದ ‘ಶಕ್ತಿ’ಗೆ ಗೊತ್ತಾಗಿದೆ. ಆ ಪ್ರಕಾರ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಪ್ರಸಾದ್ ಪ್ರೌಢಶಾಲೆಯೊಂದು ಮುಚ್ಚಲ್ಪಟ್ಟಿದೆ ಎಂಬದು ಆತಂಕಕಾರಿ ಬೆಳವಣಿಗೆಯಾಗಿದೆ.
ತೀರಾ ಗ್ರಾಮೀಣ ಭಾಗದಲ್ಲಿ ಒಂದೊಮ್ಮೆ ದಾಖಲೆಯ 300 ಇಂಚು ಮಳೆಯಾಗುವ ಈ ಪ್ರದೇಶದ ಹಳ್ಳಿಗಾಡಿನ ಮಕ್ಕಳಿಗಾಗಿ ಪ್ರಸಾದ್ ಪ್ರೌಢಶಾಲೆಯನ್ನು ಹಿರಿಯರು ಸ್ಥಾಪಿಸಿದ್ದು, ಅಂತಹ ಶಿಕ್ಷಣ ಪ್ರೇಮಿಗಳ ಕನಸಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ವರ್ಷಾಂತ್ಯಕ್ಕೆ ಶಾಂತಳ್ಳಿಯ ಪ್ರಸಾದ್ ಪ್ರೌಢಶಾಲೆಯೊಂದಿಗೆ ಇತರ ಆರು ವಿದ್ಯಾಲಯಗಳು ಬಾಗಿಲು ಮುಚ್ಚಿಕೊಂಡಿವೆ. ಈ ಪೈಕಿ ಕೊಡ್ಲಿಪೇಟೆ ಹೋಬಳಿ ಕೆಳಕೊಡ್ಲಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಸೇರಿದೆ. ವಿಚಿತ್ರವೆಂದರೆ ಶಾಂತಳ್ಳಿಯ ಪ್ರೌಢಶಾಲೆಯೊಂದಿಗೆ ಅದೇ ಹೋಬಳಿಯ ಕುಂದಳ್ಳಿ ಕಿರಿಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಅಲ್ಲಿನ ಪುಷ್ಪಗಿರಿ ತಪ್ಪಲಿನ ಮಲ್ಲಿಕಾರ್ಜುನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕೂಡ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬೀಗ ಜಡಿಯುವಂತಾಗಿದೆ.
ಇನ್ನು ಉಳಿದಂತೆ ಮಡಿಕೇರಿ ತಾಲೂಕಿನ ಭಾಗಮಂಡಲ ವ್ಯಾಪ್ತಿಯ ಕೊಪ್ಪದಬಾಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೇರಂಬಾಣೆ ಸಮೀಪದ ಅರ್ವತೊಕ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಪಾಜೆ ವ್ಯಾಪ್ತಿಯ ಕಲ್ಲಳ್ಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿ ಹೋಗಿವೆ. ಹೀಗೆ ವರ್ಷದಿಂದ ವರ್ಷಕ್ಕೆ ಕೊಡಗಿನಂತಹ ಜಿಲ್ಲೆ ಶೈಕ್ಷಣಿಕವಾಗಿ ಗ್ರಾಮೀಣ ಭಾಗದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಕಳವಳಕಾರಿ ಸಂಗತಿ ಗೋಚರಿಸತೊಡಗಿದೆ. ಇಲ್ಲಿ ಗಮನಿಸಬೇಕಾದದ್ದು ಶಾಂತಳ್ಳಿ ಹೋಬಳಿಯ ಮೂರು ಶಾಲೆಗಳು ಈ ಸಾಲಿನಲ್ಲೇ ಮುಚ್ಚಲ್ಪಟ್ಟಿರುವದು.
ಏಳು ವರ್ಷಗಳ ಹಿನ್ನೋಟ : ಈ ಸಾಲಿನ ಕತೆ ಹೀಗಾದರೆ ಕಳೆದ 2016-17ನೇ ಶೈಕ್ಷಣಿಕ ವರ್ಷದಲ್ಲಿ ಕೂಡ ಅದೇ ಶಾಂತಳ್ಳಿ ಹೋಬಳಿ ಅಬ್ಬಿಮಠ ಬಾಚಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. ಇದರೊಂದಿಗೆ ಸೋಮವಾರಪೇಟೆ ತಾಲೂಕು ಹಂಡ್ಲಿ ಗ್ರಾಮದ ಹಿತ್ತಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಬಾಗಿಲು ಹಾಕಿಕೊಂಡಿದೆ. ಅಲ್ಲದೆ ಕಳೆದ ವರ್ಷ ಮಡಿಕೇರಿ ತಾಲೂಕಿನ ಹಮ್ಮಿಯಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಕ್ಕೆ ಹೊಂದಿಕೊಂಡಿರುವ ಇಲ್ಲಿನ ಭಗವತಿ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಲ್ಪಟ್ಟಿರುವದು ತೀವ್ರ ಅಚ್ಚರಿಯೊಂದಿಗೆ ಆತಂಕದ ಬೆಳವಣಿಗೆಯಾಗಿದೆ.
2015-2016ನೇ ಸಾಲು : ಇನ್ನು ಈ ಸಾಲಿನಲ್ಲಿಯೂ ಸೋಮವಾರಪೇಟೆ ತಾಲೂಕಿನ ಹಂಡ್ಲಿ ವ್ಯಾಪ್ತಿಯ ಮನಗನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ, ಅದೇ ತಾಲೂಕಿನ ಶಾಂತಳ್ಳಿ ಹೋಬಳಿಯ ಕೂತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಗಿಲು ಹಾಕಿಕೊಂಡಿವೆ.
2014-2015: ಈ ವರ್ಷ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲುವಿನಲ್ಲಿ ಪಟ್ಟಣ ವ್ಯಾಪ್ತಿಯ ಶಾಲೆಯೊಂದು ಮುಚ್ಚಲ್ಪಟ್ಟಿದ್ದು, ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿಗೆ ಈ ಬೆಳವಣಿಗೆ ವಿಸ್ತಾರಗೊಂಡಂತಿದೆ. ಗೋಣಿಕೊಪ್ಪಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ವರ್ಷ ಮುಚ್ಚಲಾಗಿದೆ. ಅದುವರೆಗೆ ವರ್ಷದಿಂದ ವರ್ಷಕ್ಕೆ ಮುಚ್ಚಿಹೋಗುತ್ತಿದ್ದ ಸರಕಾರಿ ಶಾಲೆಗಳ ಪೈಕಿ 2013-2014ರಲ್ಲಿ ಸ್ವಲ್ಪ ಆಶಾದಾಯಕವೆಂಬಂತೆ ಯಾವದೇ ಶಾಲೆಯು ಈ ಶೈಕ್ಷಣಿಕ ವರ್ಷದಲ್ಲಿ ಮುಚ್ಚಲ್ಪಟ್ಟಿದ್ದು, ವರದಿಯಾಗಿಲ್ಲ. ಬದಲಾಗಿ 2012-13ನೇ ಸಾಲಿಗೆ ಮತ್ತೆ ವೀರಾಜಪೇಟೆ ತಾಲೂಕು ಕುಂಜಿಲಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇತಿಹಾಸದ ಪುಟ ಸೇರುವದರೊಂದಿಗೆ ಮುಚ್ಚಿದೆ.
2011-2012ನೇ ವರ್ಷ : ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಈ ಸಾಲಿನಲ್ಲಿ ದಕ್ಷಿಣ ಕೊಡಗಿನ ಬಾಳೆಲೆ ಸಮೀಪದ ಕೊಲ್ಲಿಹಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿಗೆ, ಅದೇ ವೀರಾಜಪೇಟೆ ಬಳಿ ಮಾಯಮುಡಿ ವ್ಯಾಪ್ತಿಯ ಮರಿಯಮ್ಮಾನ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. ಇದರೊಂದಿಗೆ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮೊಣ್ಣಂಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿದ್ದು, ಆ ಮೊದಲೇ ಇದೇ ಗ್ರಾಮೀಣ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ವಣಚಲು ಸರಕಾರಿ ಪ್ರಾಥಮಿಕ ಶಾಲೆ ದೇವಸ್ತೂರು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಡಮಕಲ್ ಶಾಲೆಗಳು ಮುಚ್ಚಿ ಹೋಗಿರುವ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕಾರಿ ವಿದ್ಯಾಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಮುಚ್ಚಲ್ಪಡುವದರೊಂದಿಗೆ, ಈ ನಾಡಿನ ಎಳೆಯರು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿರುವ ಆತಂಕ ಮೂಡುವಂತಾಗಿದೆ.