ಶ್ರೀಮಂಗಲ, ಮೇ 21: ಹುದಿಕೇರಿ ವ್ಯಾಪ್ತಿಯ ಏಕೈಕ ರಾಷ್ಟ್ರೀಕೃತ ಕಾರ್ಪೋರೇಷನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರಿಗೆ ನಿಯಮಾನುಸಾರ ಸೇವೆ ದೊರೆಯದೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಮುಂದಿನ ಒಂದು ವಾರದೊಳಗೆ ಸರಿಪಡಿಸಲು ಆದೇಶಿಸುವಂತೆ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯ ವರನ್ನು ಹುದಿಕೇರಿ ವ್ಯಾಪ್ತಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹುದಿಕೇರಿಯ ಬ್ಲಾಸಮ್ ಅಸೋಸಿಯೇಷನ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಹೊಟ್ಟೇಂಗಡ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲೆಯ ಲೀಡ್ ಬ್ಯಾಂಕ್ ಆಗಿರುವ ಕಾರ್ಪೋರೇಷನ್ ಬ್ಯಾಂಕ್‍ನ ಹುದಿಕೇರಿ ಶಾಖೆಯಲ್ಲಿ ವ್ಯವಸ್ಥಾಪಕರು ಸೇರಿದಂತೆ ಸಿಬ್ಬಂದಿಗಳು ಗ್ರಾಹಕ ಸ್ನೇಹಿಯಾಗಿ ಸೇವೆ ನೀಡುವಲ್ಲಿ ವಿಫಲವಾಗಿದ್ದು, ಉದಾಸೀನದ ಪ್ರವೃತ್ತಿ ಕಂಡುಬಂದಿದೆ. ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಸಹ ಅಸಕ್ತಿ ತೋರುತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್‍ನಲ್ಲಿ ಅಗತ್ಯವಾದ ನಗದು ಲಭ್ಯವಾಗುತ್ತಿಲ್ಲ. ಗ್ರಾಹಕರಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಶಾಖೆಯಲ್ಲಿರುವ ಸಿಬ್ಬಂದಿಗಳಿಗೆ ಸ್ಥಳೀಯ ಭಾಷೆ ತಿಳಿಯದೆ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ವ್ಯವಹಾರ ನಡೆಸುತ್ತಿದ್ದು, ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತವಾಯಿತು.

ಬ್ಯಾಂಕ್‍ನಲ್ಲಿ ಸಾಲ ಮರುಪಾವತಿಸಿದ ಗ್ರಾಹಕರಿಗೆ ಹೊಸ ಸಾಲ ನೀಡುತ್ತಿಲ್ಲ. ಬ್ಯಾಂಕ್ ಸಾಲ ಪಡೆದ ಗ್ರಾಹಕರಿಗೆ ಹೆಚ್ಚುವರಿ ವೆಚ್ಚ ಹಾಕುವಾಗ ಯಾವದೇ ಮಾಹಿತಿ ನೀಡುವದಿಲ್ಲ. ಆದ್ದರಿಂದ ಈ ದುರವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬ್ಯಾಂಕ್‍ನ ಎದುರು ಪ್ರತಿಭಟನೆ ನಡೆಸುವ ಮುನ್ನಚ್ಚೆರಿಕೆ ನೀಡಿದರು.

ಈ ಸಂದರ್ಭ ಬ್ಲಾಸಮ್ ಅಸೋಸಿಯೇಷನ್ ಉಪಾಧ್ಯಕ್ಷ ಚೆಕ್ಕೇರ ಮಾದಯ್ಯ, ಕಾರ್ಯದರ್ಶಿ ಬಾನಂಗಡ ಪೂಣಚ್ಚ, ಸದಸ್ಯರುಗಳಾದ ಬಯವಂಡ ಬಿ.ಲಕ್ಷ್ಮಣ, ಚೆಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಜಾಕಿ ಉತ್ತಯ್ಯ, ಚೆಕ್ಕೇರ ರಂಜಿತ್, ಕಾಡ್ಯಮಾಡ ಚರ್ಮಣ, ಇಟ್ಟೀರ ವಿಷ್ಣು, ಕಳ್ಳೇಂಗಡ ಮೋಹನ್, ಕೊಡಂಗಡ ಕುಶಾಲಪ್ಪ, ಬಯವಂಡ ವಾಸು ಮಾದಪ್ಪ, ಹೊಟ್ಟೇಂಗಡ ಚಂಗಪ್ಪ, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಮತ್ತಿತರರು ಹಾಜರಿದ್ದರು.