ವೀರಾಜಪೇಟೆ, ಮೇ 26: ಅನೇಕ ದಶಕಗಳಿಂದಲೂ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರಕಾರದ ಅಂಚೆ ನೌಕರರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಎಲ್ಲ ಬೇಡಿಕೆಗಳಿಗೆ ಕೇಂದ್ರದ ಸಂಬಂಧಿಸಿದ ಇಲಾಖೆಯ ಸಚಿವರು, ವರಿಷ್ಠರು ಈಡೇರಿಸುವಂತಾಗಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ವೀರಾಜಪೇಟೆಯ ಗಡಿಯಾರ ಕಂಬದ ಬಳಿಯ ಪ್ರಧಾನ ಅಂಚೆ ಕಚೇರಿಯ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎರಡು ದಿನಗಳಿಂದ ತಾಲೂಕಿನ ಅಂಚೆ ಕಚೇರಿಗಳ ಸುಮಾರು 190 ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಸಂಕೇತ್ ಪೂವಯ್ಯ ಅವರು ಅಂಚೆ ನೌಕರರು ಸಿಪಾಯಿ, ಪೊಲೀಸರ ಸೇವೆಯಂತೆ ಹೊತ್ತು ಗೊತ್ತಿಲ್ಲದೆ ದುಡಿಯುತ್ತಿದ್ದಾರೆ. ಮಲೆನಾಡು ಪ್ರದೇಶದಲ್ಲಿಯೂ ಅದರಲ್ಲಿಯೂ ಮಳೆಗಾಲದಲ್ಲಿ ಆರು ತಿಂಗಳಲ್ಲಿ ಅಂಚೆ ನೌಕರರು ಕಠಿಣ ಸೇವೆಗೂ ಬದ್ಧರಾಗಿರುತ್ತಾರೆ. ಅಂಚೆ ನೌಕರರ ಪರಿಶ್ರಮ, ನಿಷ್ಠಾವಂತ ಕಠಿಣ ಸೇವೆಗೆ ಕೇಂದ್ರ ಸರಕಾರ ಗದಾ ಪ್ರಹಾರ ಮಾಡಲು ಹೊರಟಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಅಂಚೆ ನೌಕರರಿಗೆ ಯಾವದೇ ಮೂಲ ಸೌಲಭ್ಯಗಳು ದೊರಕುತ್ತಿಲ್ಲ ಬದಲಿಗೆ ಸೇವೆಯ ಹೆಸರಿನಲ್ಲಿ ಕಿರುಕುಳ ನೀಡಿ ದೌರ್ಜನ್ಯವೆಸಗಲಾಗುತ್ತಿದೆ. ಅಂಚೆ ನೌಕರರ ಬೇಡಿಕೆಯಂತೆ ಕಮಲೇಶ್ ಚಂದ್ರ ಸಮಿತಿ ಆಯೋಗದ (ಜಿಡಿಎಸ್) ಏಳನೇ ವೇತನದ ವರದಿಯನ್ನು ಜಾರಿಗೊಳಿಸುವದು. ಎಂಟು ಗಂಟೆ ಕೆಲಸ ಖಾಯಂಗೊಳಿಸುವದು. ದೆಹಲಿ ಮತ್ತು ಮದ್ರಾಸ್ ನ್ಯಾಯಾಲಯಗಳ ಆದೇಶದಂತೆ ನೌಕರರಿಗೆ ಪಿಂಚಣಿ ನೀಡುವದು. ಅಂಚೆ ಇಲಾಖೆಯ ನೌಕರರಿಗೆ ಇತರ ಎಲ್ಲ ನೌಕರರಂತೆ ಸಮಾನತೆಯನ್ನು ಕಾಯ್ದುಕೊಂಡು ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದರಲ್ಲದೆ ಈ ಮುಷ್ಕರಕ್ಕೆ ಬೆಂಬಲ ನೀಡುವದಾಗಿ ಮುಷ್ಕರದಲ್ಲಿ ನಿರತರಾದ ನೌಕರರಿಗೆ ಭರವಸೆ ನೀಡಿದರು.
ಮುಷ್ಕರದ ಸ್ಥಳಕ್ಕೆ ಇಂದು ಭೇಟಿ ನೀಡಿದ ಸಂಕೇತ್ ಪೂವಯ್ಯ ಅವರಿಗೆ ಸಂಘಟನೆಯ ಪ್ರಮುಖರು ಮನವಿ ಪತ್ರ ನೀಡಿದರು.
ಸಂಘಟನೆಯ ಕಾರ್ಯದರ್ಶಿ ಬಿ.ಎಂ.ಮಂಜುನಾಥ್ ಮಾತನಾಡಿ, ಅಂಚೆ ನೌಕರರ ಮುಷ್ಕರಕ್ಕೆ ಸಂಕೇತ್ ಪೂವಯ್ಯ ಅವರ ಬೆಂಬಲದ ನಿರ್ಧಾರವನ್ನು ಸಂಘಟನೆ ಮುಕ್ತವಾಗಿ ಸ್ವಾಗತಿಸುತ್ತದೆ. ಈ ಹಿಂದೆಯೂ ಸಂಘಟನೆ ವತಿಯಿಂದ ಮುಷ್ಕರ ನಡೆಸಲಾಯಿತಾದರೂ ಯಾವದೇ ಪ್ರಯೋಜನವಾಗದ್ದರಿಂದ ಈಗ ಸಂಘಟನೆ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿರುವದಾಗಿ ತಿಳಿಸಿದರಲ್ಲದೆ ಸಂಘಟನೆಯ ಬೇಡಿಕೆಗಳು ಈಡೇರುವ ತನಕ ಮುಷ್ಕರ ಮುಂದುವರೆಸುವದಾಗಿ ಹೇಳಿದರು.
ಈ ಸಂದರ್ಭ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್, ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.