ಗೋಣಿಕೊಪ್ಪ ವರದಿ, ಮೇ 26: ಕೊಡಗು ಬಲಿಜ ಸಮಾಜದ ವತಿಯಿಂದ ಚೊಚ್ಚಲ ಕ್ರೀಡೋತ್ಸವಕ್ಕೆ ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಕರ್ನಾಟಕ ಪ್ರದೇಶ ಬಲಿಜ ಸಂಘ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಬಲಿಜ ಜನಾಂಗಗಳ ನಡುವೆ ಮೊದಲ ಬಾರಿಗೆ ಕೊಡಗಿನಲ್ಲಿ ಕ್ರೀಡಾಕೂಟ ಆಯೋಜಿಸಿರುವದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಸರ್ಕಾರ ಬಲಿಜ ಜನಾಂಗದ ಗಣತಿ ನಡೆಸಿ ಸಂಖ್ಯೆವಾರು ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ನಾವೇ ಸಮಾಜದ ಮೂಲಕ ಗಣತಿ ನಡೆಸಿ ನಮ್ಮ ಜನಸಂಖ್ಯೆಯನ್ನು ಅರಿತುಕೊಳ್ಳಲು ಮುಂದಾಗಿದ್ದೇವೆ. ಇದರಿಂದ ಸಮಾಜದ ಅಭಿವೃದ್ದಿಗೆ ಪೂರಕ ವಾಗಲಿದೆ. ಹೆಚ್ಚು ಬಡತನದಲ್ಲಿರು ವವರು ನಮ್ಮ ಸಮಾಜದಲ್ಲಿ ಇರುವದರಿಂದ ಹಸಿವು ಮುಕ್ತ ಯೋಜನೆಗೆ ಚಿಂತನೆ ನಡೆಸಿದ್ದೇವೆ. ಜಿಲ್ಲಾ ಸಂಘದ ಮೂಲಕ ಬಲಿಜ ಮಕ್ಕಳಿಗೆ ಊಟ ನೀಡುವ ಮೂಲಕ ಹಸಿವುಮುಕ್ತ ಯೋಜನೆ ರೂಪಿಸ ಲಾಗುವದು ಎಂದರು.
ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿನಾಯ್ಡು ಮಾತನಾಡಿ, ಜನಾಂಗದವರು ಒಂದಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವದು ಜನಾಂಗದ ಅಭಿವೃದ್ಧಿಗೆ ಶುಭಸೂಚನೆ ದೊರೆತಂತಾಗಿದೆ. ನಮ್ಮ ಒಗ್ಗಟ್ಟಿಗೆ ಬಲ ತುಂಬಲಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರೀಡಾಕೂಟದೊಂದಿಗೆ ಆಯಾ ಜನಾಂಗದ
(ಮೊದಲ ಪುಟದಿಂದ) ಭಾಷೆಗೆ ಒತ್ತು ನೀಡುವದು ಉತ್ತಮ ಬೆಳವಣಿಗೆಯಾಗಲಿದೆ. ಕನ್ನಡ ಭಾಷೆಯೊಂದಿಗೆ ಜನಾಂಗ ಭಾಷೆ ಮೂಲಕ ಕಾರ್ಯಕ್ರಮ ನಡೆಸಿದರೆ ಭಾಷಾಭಿವೃದ್ದಿ ಮೂಲಕ ಜನಾಂಗದ ಸಂಸ್ಕøತಿಯ ಪೋಷಣೆಯಾಗುತ್ತದೆ ಎಂದು ಸಲಹೆ ನೀಡಿದರು.
ಮೈದಾನದಲ್ಲಿ ಮಹಿಳೆಯರು ನೀಲಿ ಸೀರೆಯುಟ್ಟು ಪೂರ್ಣಕುಂಭ ಮೆರವಣಿಗೆ ನಡೆಸಿದರು. ಪುರುಷರು ಕೇಸರಿ ಬಣ್ಣದಲ್ಲಿ ಕಂಗೊಳಿಸಿದರು. ಕ್ರೀಡೋತ್ಸವದಲ್ಲಿ ಉಚಿತ ನೇತ್ರ ತಪಾಸಣೆ ನಡೆಯಿತು. ಪಾಲ್ಗೊಂಡವರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್, ತಾಲೂಕು ಬಲಿಜ ಸಮಾಜ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷ ಎಸ್. ಕೆ. ಯತಿರಾಜ್ನಾಯ್ಡು, ಪ್ರ. ಕಾರ್ಯದರ್ಶಿ ಗೀತಾ ನಾಯ್ಡು, ಗೌ. ಕಾರ್ಯದರ್ಶಿ ಗಣೇಶ್, ಖಜಾಂಜಿ ಟಿ.ಎನ್.ಲೋಕನಾಥ್, ಬಲಿಜ ಬಿಂಬ ಸಂಪಾದಕ ಎನ್. ಸಂಜೀವಪ್ಪ, ಹಿರಿಯರಾದ ಲಕ್ಷ್ಮಣ್ ಉಪಸ್ಥಿತರಿದ್ದರು. ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್ ಸ್ವಾಗತಿಸಿದರು. ಗೀತಾನಾಯ್ಡು ವಂದಿಸಿದರು.
ಪತ್ರಕರ್ತರ ಸಂಘಕ್ಕೆ ಕ್ರಿಕೆಟ್ ಕಪ್
ಕ್ರೀಡಾಕೂಟ ಪ್ರಯುಕ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಬಲಿಜ ಸಮಾಜ ಆರೆಂಜ್ ತಂಡಗಳ ನಡುವೆ ನಡೆದ ಕ್ರಿಕೆಟ್ ಪ್ರದರ್ಶನ ಪಂದ್ಯಾಟದಲ್ಲಿ ಪತ್ರಕರ್ತರ ಸಂಘ 49 ರನ್ಗಳ ಜಯ ಸಾಧಿಸಿ ಕಪ್ ಹಾಗೂ ನಗದು ಬಹುಮಾನ ಗೆದ್ದುಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪತ್ರಕರ್ತರ ಸಂಘ ನಿಗದಿತ 4 ಒವರ್ಗಳಲ್ಲಿ ವಿವೇಕ್ ಅವರ 52 ರನ್ಗಳ ಕಾಣಿಕೆಯಿಂದ 116 ರನ್ ಪೇರಿಸಿತು. ಹೇಮಂತ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಪ್ರತಿಯಾಗಿ ಬ್ಯಾಟ್ ಮಾಡಿದ ಬಲಿಜ ಆರೆಂಜ್, 67 ರನ್ಗಳಿಸಿ ಸೋಲನುಭವಿಸಿತು.
ಇಂದು ಸಮಾರೋಪ
ತಾ. 27ರಂದು (ಇಂದು) ಅಪರಾಹ್ನ ಕ್ರಿಕೆಟ್ ಫೈನಲ್, ಹಗ್ಗ ಜಗ್ಗಾಟ ಫೈನಲ್ಸ್ ಹಾಗೂ ಸಂಗೀತ ಕುರ್ಚಿ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರು ಸಂಸದ ಪಿ.ಸಿ.ಮೋಹನ್ ಬಹುಮಾನ ವಿತರಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಬಲಿಜ ಸಂಘ ಅಧ್ಯಕ್ಷ ಹಾಗೂ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಟ್ರೋಫಿ ದಾನಿಗಳಾದ ಟಿ.ವೇಣುಗೋಪಾಲ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.