ಮಡಿಕೇರಿ, ಮೇ 26 : ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣಾ ಸಂದರ್ಭ ಘೋಷಿಸಿದ್ದ ಈಗಿನ ಮುಖ್ಯಮಂತ್ರಿ
ಹೆಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದು, ಅದಕ್ಕಾಗಿ ತಾ. 28ರಂದು ನೀಡಿರುವ ಕರ್ನಾಟಕ ಬಂದ್‍ಗೆ ಕೊಡಗಿನ ಜನತೆ ಸ್ವಯಂ ಪ್ರೇರಿತರಾಗಿ ಬೆಂಬಲಿಸುವಂತೆ ಬಿಜೆಪಿಯ ಮೂವರು ಶಾಸಕರು ಕರೆ ನೀಡಿದ್ದಾರೆ.ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ, ಪಕ್ಷ ಅಧಿಕಾರಕ್ಕೆ ಬಂದಲ್ಲಿ ತಕ್ಷಣ ರೈತರ, ಸ್ವಸಹಾಯ ಗುಂಪುಗಳ ಹಾಗೂ ಸ್ತ್ರೀಶಕ್ತಿ ಸಂಘಗಳ ಎಲ್ಲ ಸಾಲ ಮನ್ನಾ ಮಾಡುವದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ ಅಧಿಕಾರ ಪಡೆದ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಈ ಬಗ್ಗೆ ಏಕ ತೀರ್ಮಾನ ಸಾಧ್ಯವಿಲ್ಲವೆಂದು ತಮ್ಮ ಭರವಸೆಗೆ ಕುಂಟು ನೆಪ ಒಡ್ಡುತ್ತಿದ್ದಾರೆಂದು ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಟೀಕಿಸಿದ್ದಾರೆ. ಈಗಿನ ಸಮ್ಮಿಶ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ ಅಧಿಕಾರ ಹಂಚಿಕೊಳ್ಳುವದೇ ಮುಖ್ಯವಾಗಿದೆ. ವಚನ ಭ್ರಷ್ಟ ಮುಖ್ಯಮಂತ್ರಿಯವರ ವಿರುದ್ಧ ಕರ್ನಾಟಕ ಬಂದ್‍ಗೆ ಈಗಾಗಲೇ ಕರೆ ನೀಡಿದ್ದು, ಜಿಲ್ಲೆಯಲ್ಲಿಯೂ ಅದನ್ನು ಯಶಸ್ಸುಗೊಳಿಸುವಂತೆ ಶಾಸಕತ್ರಯರು ಕರೆ ನೀಡಿದ್ದಾರೆ. ಚೇಂಬರ್ ಆಫ್ ಕಾಮರ್ಸ್, ಖಾಸಗಿ ಬಸ್ ಹಾಗೂ ಇತರ ವಾಹನಗಳ ಸಂಘ- ಶಾಲಾ - ಕಾಲೇಜುಗಳು ಹಾಗೂ ವಾಣಿಜ್ಯೋದ್ಯಮಿಗಳು, ತೋಟ ಮಾಲೀಕರು, ಕಾರ್ಮಿಕರು, ರೈತ ಬಂಧುಗಳು ಸ್ವಯಂ ಪ್ರೇರಿತರಾಗಿ ಬಂದ್ ಯಶಸ್ಸಿಗೆ ಕಾರಣರಾಗಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿ ಬೆಪ್ಪುರನ ಮೇದಪ್ಪ ಇವರುಗಳೂ ಬಂದ್‍ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ.