ಮಕ್ಕಳು ಗಲಾಟೆ ಮಾಡಿದಾಗ ತಂದೆ - ತಾಯಿಯಾದವರು ಗದ್ಗದ ಸ್ವರದಿಂದ ಹೆದರಿಸುತ್ತಾರೆ. ಇಲ್ಲವೆ ಹೊಡೆಯುತ್ತಾರೆ. ಕಠೋರತೆ ತೋರಿದ್ದಲ್ಲಿ ನಂತರದ ದಿನಗಳಲ್ಲಿ ಪಶ್ಚಾತ್ತಾಪ ಪಡುವ ಪ್ರಸಂಗ ಎದುರಾಗಬಹುದು. ಮಕ್ಕಳನ್ನು ಅತಿಯಾದ ಸ್ಟ್ರಿಕ್ಟ್ ಮಾಡಲು ಅವರ ಮೇಲೆ ಒತ್ತಡ ಹೇರಿದರೆ ಅವರ ಆತ್ಮವಿಶ್ವಾಸ ಕುಂದುತ್ತದೆ ಮತ್ತು ನಿರುತ್ಸಾಹಿಗಳಾಗುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ. ಪೋಷಕರು ಮಕ್ಕಳಿಗೆ ಪ್ರೀತಿ ಮತ್ತು ಸಾಂಗತ್ಯದ ಅವಶ್ಯಕತೆ ಇದ್ದಾಗ ಅದನ್ನು ತೋರಿಸಬೇಕು.
ಪ್ರೀತಿ-ಶಿಸ್ತು ಎಲ್ಲದಕ್ಕೂ ಎಲ್ಲೆಯಿರಬೇಕು. ಯಾವದೇ ವಿಷಯದಲ್ಲಾಗಲಿ ಎಲ್ಲೆ ಮೀರಿದರೆ ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಒಳ್ಳೆಯ ಪೋಷಣೆಯಲ್ಲಿ ಸಹಾನುಭೂತಿ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಆತ್ಮನಿಯಂತ್ರಣ, ಕರುಣೆ, ಸಹಕಾರ, ಮನುಷ್ಯತ್ವ ಮುಂತಾದ ಅಂಶಗಳಿರಬೇಕು. ಇಂತಹ ಪೋಷಣೆಯು ಮಕ್ಕಳು ಖಿನ್ನತೆಗೊಳಗಾಗುವದನ್ನು ತಪ್ಪಿಸುತ್ತದೆ.
ಒಳ್ಳೆಯ ಪೋಷಕರಾಗಲು ನಿಮ್ಮ ಮಕ್ಕಳನ್ನು ಅತಿಯಾದ ಶಿಸ್ತಿನಲ್ಲಿಡುವದು ಒಳ್ಳೆಯದಲ್ಲ. ಮಕ್ಕಳ ಜೀವನದ ಪ್ರತಿಯೊಂದು ವಿಷಯಕ್ಕೂ ಪೋಷಕರಾದವರು ನಿಮ್ಮದೇ ಆದ ನಿಯಮವನ್ನು ರೂಪಿಸುತ್ತಾ ಹೋದರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಅತಿಯಾದ ಶಿಸ್ತಿನಿಂದ ಮಕ್ಕಳಿಗೆ ಸ್ವಾತಂತ್ರ್ಯ ದೊರೆಯದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸ್ವನಿಯಂತ್ರಣ ಗುಣವೇ ಮೂಡಿರುವದಿಲ್ಲ. ಮಕ್ಕಳು ತಮ್ಮ ಮನಸ್ಸಿನ ಯಾವದೇ ವಿಚಾರವನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಹೋಗುವದಿಲ್ಲ. ನುಡಿಗಿಂತ ನಡೆಯು ಹೆಚ್ಚು ಪ್ರಭಾವಯುತವಾದುದರಿಂದ ನಿಮ್ಮ ಮಕ್ಕಳಿಗೆ ನಿರ್ಣಯ ತೆಗೆದುಕೊಳ್ಳಲು ಬಿಡಿ. ಪೋಷಕರಾದವರು ಒಳ್ಳೆಯ ನಡತೆಯಿಂದ ನಿಮ್ಮ ಮಕ್ಕಳಿಗೆ ಮಾದರಿಯಾಗಿ ನಿಂತು ನಂತರದ ದಿನಗಳಲ್ಲಿ ನಿಮ್ಮ ಮಕ್ಕಳಿಂದ ಒಳ್ಳೆಯ ನಡೆ - ನುಡಿಗಳನ್ನು ಅವರಿಂದ ಅಪೇಕ್ಷಿಸಿ. ಅಗತ್ಯವಿರುವ ಮಾತಿಗೆ ಒಪ್ಪಿಗೆ ನೀಡಿ. ಅತಿಯಾದ ಸಲಿಗೆಯೂ ಒಳ್ಳೆಯದಲ್ಲ. ಏಕೆಂದರೆ ಮಕ್ಕಳಿಗೆ ಯಾವದು ಸರಿ, ಯಾವದು ತಪ್ಪು ಎಂಬದರ ವಿವೇಚನೆ ಇನ್ನೂ ಮೂಡಿರುವದಿಲ್ಲ. ಮಕ್ಕಳನ್ನು ಅವರಿಷ್ಟಕ್ಕೆ ಬಿಡದೆ ಅವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಸದಾ ನೆರಳಿನಂತೆ ಅವರ ಜೊತೆಯಲ್ಲಿರುವದು ಸರಿಯಲ್ಲ. ನಿಮ್ಮ ನಡುವೆ ಅಂತರತೆಯನ್ನು ಕಾಯ್ದುಕೊಳ್ಳಿ. ಮಕ್ಕಳು ಬೆಳೆದಂತೆ ಅವರ ನಡವಳಿಕೆ ಬದಲಾಗುತ್ತದೆ. ಈ ನಡವಳಿಕೆಯು ಬದಲಾದಂತೆ ಪರಸ್ಪರ ಅದಕ್ಕೆ ತಕ್ಕಂತೆ ಪೋಷಣೆಯಲ್ಲಿ ಬದಲಾವಣೆಯನ್ನು ತರುವದು ಒಳ್ಳೆಯದು.
ಮಕ್ಕಳೊಂದಿಗೆ ಮಾತನಾಡುವಾಗ ಪ್ರೀತಿಯಿಂದ ಮಾತನಾಡಿ. ಅವರಿಗೆ ಸ್ವಾತಂತ್ರ್ಯ ನೀಡಿ. ಸೀಮಿತವಾಗಿ ಶಿಸ್ತು ಇರಲಿ. ಅತಿಯಾದ ಶಿಸ್ತು ಬೇಡ. ಹೀಗೆ ಮಾಡಿದಾಗ ಮಕ್ಕಳಿಗೆ ಜವಾಬ್ದಾರಿಯುತ ಭಾವನೆ ಮೂಡುವದಿಲ್ಲ. ಆತ್ಮ ನಿಯಂತ್ರಣವಿರುವದಿಲ್ಲ. ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ವಿಫಲವಾಗುವ ಸಾಧ್ಯತೆ ಕಂಡು ಬರುತ್ತದೆ. ಮಕ್ಕಳು ಏನು ಹೇಳುತ್ತಾರೋ ಅದನ್ನು ಪೋಷಕರಾದವರು ಕಿವಿಗೊಟ್ಟು ಕೇಳಿ. ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ. ಮಕ್ಕಳೊಂದಿಗೆ ಬಾಲ್ಯದಿಂದಲೇ ಜವಾಬ್ದಾರಿಯುತ ಭಾವನೆ ಮೂಡುವಂತೆ ನೋಡಿಕೊಳ್ಳಬೇಕು. ನಿಮ್ಮ ಇಷ್ಟ-ಕಷ್ಟಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳು ತಾವೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿ.