ಮಡಿಕೇರಿ, ಮೇ 26: ಈತನಕ ರಜೆಯ ಗುಂಗಿನಲ್ಲಿದ್ದ ವಿದ್ಯಾರ್ಥಿಗಳ ರಜೆಯ ಸಂಭ್ರಮ ತಾ. 27 ರಂದು (ಇಂದು) ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ತಾ. 28 ರಿಂದ ಪ್ರಾರಂಭವಾಗಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಇದಕ್ಕೆ ಅಗತ್ಯ ಸಿದ್ಧತೆ ನಡೆಸಿದೆ.ತಾ. 28 ರ ಸೋಮವಾರದಂದು ಶಾಲಾ ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಚಾಲನೆ ದೊರೆಯಲಿದೆ. ಆರಂಭದ ದಿನದಂದು ವಿದ್ಯಾರ್ಥಿಗಳನ್ನು ಸಿಹಿಯೂಟ, ಬ್ಯಾಂಡ್ ವಾದನದ ಸೌಲಭ್ಯವಿರುವಲ್ಲಿ ಇದರೊಂದಿಗೆ ಸ್ವಾಗತ ಕೋರಲಾಗುತ್ತಿದೆ. ಇದಾದ ಬಳಿಕ ಜೂನ್ 8 ರ ತನಕ ಮಕ್ಕಳ ದಾಖಲಾತಿ ಆಂದೋಲನ ಹಾಗೂ ಪೂರ್ವ ಸಿದ್ಧತೆಗಳ ಬಗ್ಗೆ ಮಿಂಚಿನ ಸಂಚಾರ ನಡೆಯಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿದ್ದು, ಅಗತ್ಯ ವ್ಯವಸ್ಥೆಗಳಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಸಭೆ ನಡೆಸಿರುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಮಕ್ಕಳು ಶಾಲೆಗೆ ಬರಬೇಕು. ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ನಡೆಸುವದು ಇಲಾಖೆಯ ಉದ್ದೇಶವಾಗಿದೆ. ತಕ್ಷಣದಿಂದಲೇ ಪಾಠ ಪ್ರವಚನಗಳೂ ಆರಂಭಗೊಳ್ಳಲಿದ್ದು, ಪಠ್ಯ ಪುಸ್ತಕಗಳೂ ಲಭ್ಯವಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದೆರಡು ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ ಇತರ ಪುಸ್ತಕಗಳು ಈಗಾಗಲೇ ಸಂಗ್ರಹವಾಗಿದ್ದು, ಇದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವದು ಎಂದು ಅವರುಗಳು ಮಾಹಿತಿ ನೀಡಿದ್ದಾರೆ.