ಮಡಿಕೇರಿ, ಮೇ 27: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿದ್ದ ಗೌಡ ಫುಟ್ಬಾಲ್ ಪ್ರಶಸ್ತಿಯನ್ನು ಕಟ್ಟೆಮನೆ ತಂಡ ತನ್ನದಾಗಿಸಿಕೊಂಡಿದ್ದು, ಪೊನ್ನಚ್ಚನ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.ಕಟ್ಟೆಮನೆ ಹಾಗೂ ಪೊನ್ನಚ್ಚನ ತಂಡಗಳ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಕಟ್ಟೆಮನೆ ತಂಡ 4 ಗೋಲು ಬಾರಿಸಿತು. ಕಟ್ಟೆಮನೆ ಅಭ್ಯುದ್ 1, ಕಟ್ಟೆಮನೆ ಪ್ರೀತಮ್ 3 ಗೋಲು ಬಾರಿಸಿದರು. ಪೊನ್ನಚ್ಚನ ತಂಡದ ಪರ ಪೊನ್ನಚ್ಚನ ಪ್ರಶಾಂತ್ 1, ಪೊನ್ನಚ್ಚನ ಮಹೇಶ್ 1 ಗೋಲು ಗಳಿಸಿದರು.ಕಾಂಗೀರ ಹಾಗೂ ಕಟ್ಟೆಮನೆ ನಡುವಿನ ಸೆಮಿ ಫೈನಲ್‍ನಲ್ಲಿ ಕಟ್ಟೆಮನೆ (ಮೊದಲ ಪುಟದಿಂದ) ತಂಡ ಕಾಂಗೀರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಕಟ್ಟೆಮನೆ ಪ್ರೀತಮ್ 3 ಗೋಲು ಬಾರಿಸಿದರು.ಬಡುವಂಡ್ರ ಹಾಗೂ ಪೊನ್ನಚ್ಚನ ನಡುವಿನ ಸೆಮಿ ಫೈನಲ್‍ನಲ್ಲಿ ಪೊನ್ನಚ್ಚನ ತಂಡ ಬಡುವಂಡ್ರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಪೊನ್ನಚ್ಚನ ಶ್ರೀನಿವಾಸ್ 1 ಗೋಲು ಗಳಿಸಿದರು. ತೃತೀಯ ಸ್ಥಾನವನ್ನು ಬಡುವಂಡ್ರ, ನಾಲ್ಕನೇ ಸ್ಥಾನವನ್ನು ಕಾಂಗೀರ ತಂಡ ಪಡೆಯಿತು.ಪಂದ್ಯಾಟದಲ್ಲಿ ಉತ್ತಮ ಆಟಗಾರನಾಗಿ ಕಟ್ಟೆಮನೆ ಅಭ್ಯುದ್, ಉತ್ತಮ ಗೋಲು ಕೀಪರ್ ಆಗಿ ಬಡುವಂಡ್ರ ಯಶ್ವಿನ್, ಬೆಸ್ಟ್ ಡಿಫೆಂಡರ್ ಆಗಿ ಪೊನ್ನಚ್ಚನ ನಿಶಾಂತ್, ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ಕಟ್ಟೆಮನೆ ಪ್ರೀತಮ್, ಉತ್ತಮ ಮಹಿಳಾ ಆಟಗಾರ್ತಿಯಾಗಿ ಚೆರಿಯಮನೆ ಕುಮುದಾ, ಉತ್ತಮ ತಂಡವಾಗಿ ಕಡ್ಯದ, ಉತ್ತಮ ಯುವ ಆಟಗಾರನಾಗಿ ಕೊಂಬಂಡ ಡಿಂಪು ಇವರುಗಳು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಅಂತಿಮ ಪಂದ್ಯದಲ್ಲಿ ವಿಜೇತ ತಂಡಕ್ಕೆ ರೂ. 30 ಸಾವಿರ ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ನಗದು, ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು, ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 5 ಸಾವಿರ ನಗದು, ಟ್ರೊಫಿ ವಿತರಿಸಲಾಯಿತು. ಫೈನಲ್ ಪಂದ್ಯವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಉದ್ಘಾಟಿಸಿದರು.
ಮೊದಲ ಸೆಮಿ ಫೈನಲ್‍ನ್ನು ಮರಗೋಡು ಗ್ರಾ.ಪಂ. ಸದಸ್ಯ ಮುಂಡೋಡಿ ನಂದಾ ನಾಣಯ್ಯ, ಕಟ್ಟೆಮನೆ ಧನಂಜಯ, ಎರಡನೇ ಸೆಮಿ ಫೈನಲ್‍ನ್ನು ಮರಗೋಡು ವಿಎಸ್‍ಎಸ್‍ಎನ್ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಕಾಫಿ ಬೆಳೆಗಾರ ತೋಟಂಬೈಲು ಪ್ರದೀಪ್ ಇವರುಗಳು ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ಮೈಕ್ರೋ ಗ್ರೂಪ್‍ನ ನಿವೃತ್ತ ಸೀನಿಯರ್ ಮ್ಯಾನೇಜರ್ ಅನಂತರಾಜ ಗೌಡ ಅವರು ಮಾತನಾಡಿ, ಇಂತಹ ಆಟೋಟಗಳಿಂದ ಜನಾಂಗದ ನಡುವೆ ಪರಸ್ಪರ ಒಗ್ಗಟ್ಟು ಮೂಡಲು ಸಾಧ್ಯ ಎಂದರು.
ವಕೀಲ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಗೌಡ, ಸಮುದಾಯ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಜನಾಂಗದವರು ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿಯ ಸಂಸ್ಥಾಪಕ ಕಟ್ಟೆಮನೆ ರಾಕೇಶ್, ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಬೆಂಗಳೂರಿನ ಉದ್ಯಮಿ ಚೆರಿಯಮನೆ ರತ್ನಕುಮಾರ್, ಕೊಡಗು ಗೌಡ ಯುವ ವೇದಿಕೆಯ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಕಡ್ಲೇರ ತುಳಸಿ ಮೋಹನ್, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಮಂದ್ರೀರ ಮೋಹನ್ ದಾಸ್ ಮತ್ತಿತರರು ಇದ್ದರು.
ಇದೇ ಸಂದರ್ಭ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಯೋಜಕತ್ವದಲ್ಲಿ ಹಾಗೂ ಮರಗೋಡುವಿನ ಕಾನಡ್ಕ ಕುಟುಂಬಸ್ಥರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.