ಸಾಲ ಮನ್ನಾಕ್ಕಾಗಿ ಕಾಲಾವಕಾಶ ಕೋರಿದ ಸಿಎಂ

ಬೆಂಗಳೂರು, ಮೇ 27: ರೈತರ ಸಾಲ ಮನ್ನಾ ಮಾಡದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವದಾಗಿ ವಿಪಕ್ಷ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡುವದರ ಬಗ್ಗೆ ತಾ. 27 ರಂದು ಹೇಳಿಕೆ ನೀಡಿರುವ ಕುಮಾರಸ್ವಾಮಿ, ನಾನು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ, ರೈತರ ಸಾಲ ಮನ್ನಾ ಮಾಡಬೇಕಾದರೆ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನೊಂದಿಗೂ ಚರ್ಚೆ ನಡೆಸಬೇಕಾಗುತ್ತದೆ, ರೈತರ ಸಾಲ ಮನ್ನಾ ಮಾಡುವದರ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ವಾರ ಕಾಲಾವಕಾಶ ನೀಡಿ ಎಂದಿದ್ದಾರೆ. ನಾನು ಕುರ್ಚಿಗೆ ಅಂಟಿಕೊಂಡು ಕೂತಿಲ್ಲ, ರೈತರ ಸಾಲ ಮನ್ನಾ ಮಾಡದಿದ್ದರೆ ನಾನೇ ರಾಜೀನಾಮೆ ನೀಡುತ್ತೇನೆ. ಯಾರೂ ಒತ್ತಾಯ ಮಾಡಬೇಕಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರಂಜಾóನ್‍ಗೆ ಶುಭಕೋರಿದ ಪ್ರಧಾನಿ

ನವದೆಹಲಿ, ಮೇ 27: ಈದ್ (ರಂಜಾನ್) ನಮ್ಮ ಸಮಾಜದಲ್ಲಿನ ಸದ್ಭಾವನೆಯ ಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ರೇಡಿಯೋದ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ನ (ಮನದ ಮಾತು) 44ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಸಂತೋಷ ಮತ್ತು ಉತ್ಸಾಹದಿಂದ ಈದ್ ಆಚರಣೆ ಮಾಡಲಿದ್ದಾರೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ನಿಮ್ಮಲ್ಲರಿಗೂ ಹಬ್ಬದ ಹೃತ್ಪೂರ್ವಕ ಶುಭಾಶಯಗಳು ಎಂದರು. ವೀರ ಸಾವರ್ಕರ್ ಜನ್ಮ ದಿನದ (ಮೇ 28) ಪ್ರಯುಕ್ತ, ಮೋದಿ ತಮ್ಮ ಮಾತಿನಲ್ಲಿ ಸಾವರ್ಕರ್ ಅವರು ಪ್ರತಿಭಾವಂತ ಬರಹಗಾರ ಮತ್ತು ಸಮಾಜ ಸುಧಾರಕ ಎಂದು ಸ್ಮರಿಸಿದರು. ಮೇ ತಿಂಗಳಿಗೂ 1857ರಲ್ಲಿ ನಡೆದ ಐತಿಹಾಸಿಕ ಘಟನೆಗೂ ಸಂಬಂಧವಿದೆ. ಆ ವರ್ಷದಲ್ಲಿ ನಡೆದ ಹೋರಾಟವನ್ನು ಕೆಲವರು ಕೇವಲ ‘ಸಿಪಾಯಿ ದಂಗೆ’ ಎಂದು ಕರೆದರು. ಆದರೆ, ಅದನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೆಸರಿಸಿದ ಸಾವರ್ಕರ್ ಅವರನ್ನು ನಾನು ಗೌರವಿಸುತ್ತೇನೆ ಎಂದರು. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂರ 54ನೇ ಪುಣ್ಯತಿಥಿಯ ಪ್ರಯುಕ್ತ ಪ್ರಧಾನಿ ಮೋದಿ, ನೆಹರೂರನ್ನೂ ನೆನಪಿಸಿಕೊಂಡರು.

ಅದಿರು ಸಾಗಿಸುತ್ತಿದ್ದ 42 ಲಾರಿಗಳು ವಶ

ಬಳ್ಳಾರಿ, ಮೇ 27: ಪರವಾನಗಿ ಇಲ್ಲದೆ ಗಣಿಯಿಂದ ಅದಿರು ಸಾಗಿಸುತ್ತಿದ್ದ 42 ಲಾರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಂಡೂರು ರಸ್ತೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಎಲ್ಲ ಲಾರಿಗಳನ್ನು ಇಲ್ಲಿನ ಗುಂಡಾ ಅರಣ್ಯದ ಸಸ್ಯೋದ್ಯಾನದ ಆವರಣದಲ್ಲಿ ನಿಲ್ಲಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.