ಮಡಿಕೇರಿ, ಮೇ 27: ಕಾಡಿನಿಂದ ನಾಡಿಗೆ ಬಂದಿರುವ ಕಾಡಾನೆಗಳ ಹಿಂಡಿನಲ್ಲಿದ್ದ ಹೆಣ್ಣಾನೆಯೊಂದು ದುಷ್ಕರ್ಮಿಗಳ ಗುಂಡೇಟಿನಿಂದ ತೀವ್ರ ಗಾಯಗೊಂಡಿದೆ. ಸುಮಾರು ನಾಲ್ಕೈದು ವರ್ಷದ ಈ ಹೆಣ್ಣಾನೆ ತೀವ್ರ ಸ್ವರೂಪದ ಗಾಯಗಳೊಂದಿಗೆ ಕಾಡಾನೆ ಹಿಂಡಿನಿಂದ ತಪ್ಪಿಸಿಕೊಂಡಿದೆ.

ಸಿದ್ದಾಪುರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ಣಿಗೆ ಬಿದ್ದಿರುವ ಈ ಕಾಡಾನೆಯನ್ನು ಸುರಕ್ಷಿತವಾಗಿ ಹಿಡಿದು ತಂದು ದುಬಾರೆಯ ಸಾಕಾನೆ ಶಿಬಿರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾ. 22 ರಂದು ಗಸ್ತು ನಿರತ ಅರಣ್ಯ ಸಿಬ್ಬಂದಿಗೆ ಎದುರಾಗಿರುವ ಗಾಯಾಳು ಆನೆಯನ್ನು ದುಬಾರೆಗೆ ತರಲಾಗಿದೆ.

ಕಾಡಾನೆಯ ಹೊಟ್ಟೆ ಕೆಳ ಭಾಗ ಹಾಗೂ ಕಾಲಿನ ಬಳಿ ಬಲವಾದ ಗುಂಡೇಟಿನಿಂದ ತೀವ್ರ ಸ್ವರೂಪದ ಗಾಯವಾಗಿದ್ದು, ತೀವ್ರ ರಕ್ತ ಸ್ರಾವದೊಂದಿಗೆ ಗಾಯದ ಭಾಗದಲ್ಲಿ ಕೀವು ಕಾಣಿಸಿಕೊಂಡಿದೆ.

ಇದೀಗ ಅರಣ್ಯಾಧಿಕಾರಿಗಳು ಇಲಾಖೆಯ ವೈದ್ಯರಿಂದ ಈ ಆನೆಗೆ ಔಷಧೋಪಚಾರ ನೀಡುತ್ತಿದ್ದು, ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುಬಾರೆಯ ಸಾಕಾನೆ ಶಿಬಿರದಲ್ಲಿ ವೇದನೆಯ ನಡುವೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಆನೆಯ ದೇಹ ಹೊಕ್ಕಿರುವ ಗುಂಡುಗಳು ಹೊರ ತೆಗೆಯಲು ಸಮಸ್ಯೆಯಾಗಿದ್ದು, ಸದ್ಯದ ಮಟ್ಟಿಗೆ ಅದರ ಪ್ರಾಣ ರಕ್ಷಣೆಗೆ ಔಷಧೋಪಚಾರ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಖಚಿತ ಪಡಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಗಾಯಾಳು ಆನೆ ಚಿಕಿತ್ಸೆಯೊಂದಿಗೆ ಚೇತರಿಸಿಕೊಳ್ಳುತ್ತಿದೆ ಎಂದು ಅಲ್ಲಿನ ಅಧಿಕಾರಿ ರಂಜನ್ ಚಂಗಪ್ಪ ಪ್ರತಿಕ್ರಿಯಿಸಿದ್ದಾರೆ.