ಮಡಿಕೇರಿ, ಮೇ 27: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಅವಕಾಶವಾದಿಗಳು ಬಿಜೆಪಿ ಹಾಗೂ ಸಂಘ ಪರಿವಾರ ನಡುವೆ ವಿಘಟನೆಗೆ ಯತ್ನಿಸಿರುವ ಬಗ್ಗೆ ಆರ್ಎಸ್ಎಸ್ ಮುಖಂಡರು ಗಂಭೀರ ಚಿಂತನೆಯೊಂದಿಗೆ ಪರಸ್ಪರ ಐಕ್ಯತೆ ಕಾಯ್ದುಕೊಳ್ಳುವಂತೆ ತಿಳಿ ಹೇಳಿದರೆಂದು ಗೊತ್ತಾಗಿದೆ.
ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಆರ್ಎಸ್ಎಸ್ ಪ್ರಚಾರಕ್ ಗುರು ಪ್ರಸಾದ್ ಹಾಗೂ ಮಂಗಳೂರು ವಿಭಾಗ ಕಾರ್ಯವಾಹಕ ನ. ಸೀತಾರಾಂ ಸಮ್ಮುಖ ನಿನ್ನೆ ಬಿಜೆಪಿ ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಸೇರಿದಂತೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಾಯಿತು ಎಂದು ಗೊತ್ತಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕೆಲವರು ಹಾಲೀ ಶಾಸಕರಿಗೆ ಟಿಕೆಟ್ ನೀಡದಂತೆ ಗುಂಪುಗಾರಿಕೆ ನಡೆಸಿದ್ದಲ್ಲದೆ, ತೆರೆಮರೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದು ಬಿಜೆಪಿಯನ್ನು ಸೋಲಿಸಲು ಯತ್ನಿಸಿರುವ ಬೆಳವಣಿಗೆ ಕುರಿತು ಗಂಭೀರ ಚರ್ಚೆಯೊಂದಿಗೆ, ಮತದಾರರು ಎಲ್ಲರಿಗೂ ಒಂದು ರೀತಿಯ ಪಾಠ ಕಲಿಸಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಚುನಾವಣೆ ಹೊತ್ತಿನಲ್ಲಿ ಕೆಲವರು ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ಹೆಸರು ದುರುಪಯೋಗ ಮಾಡಿಕೊಂಡು ಹಿರಿಯರ ಗಮನ ಸೆಳೆದರೆಂದು ಹೇಳಲಾಗಿದೆ.
ಅಲ್ಲದೆ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಈ ವೇಳೆ ಮಾತನಾಡಿ, ಪ್ರಸಕ್ತ ಬೆಳವಣಿಗೆಯಿಂದ ಅಸಮಾಧಾನ ತಿಳಿಗೊಳಿಸಲು ಎಲ್ಲರು ಒಗ್ಗೂಡಿ ಸಂಘಟನೆ ಬಲಗೊಳಿಸಲು ಶ್ರಮಿಸುವಂತೆ ಸಲಹೆ ನೀಡಿದ್ದಾಗಿ ಗೊತ್ತಾಗಿದೆ. ಆರ್ಎಸ್ಎಸ್ ಪ್ರಮುಖರಾದ ಗುರು ಪ್ರಸಾದ್ ಮತ್ತು ಸೀತಾರಾಂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ ದರೊಂದಿಗೆ ಮನಸ್ತಾಪಗಳನ್ನು ಮರೆತು ಎಲ್ಲರೂ ಒಗ್ಗೂಡಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ತರುಣ ಸಮಾವೇಶ ನಡೆಸುವಂತೆ ಸಲಹೆ ನೀಡಿರುವರೆಂದು ತಿಳಿದು ಬಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ, ಆರ್ಎಸ್ಎಸ್ ಸಂಘಚಾಲಕ ಚಕ್ಕೇರ ಮನು ಸೇರಿದಂತೆ ಪರಿವಾರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿ ಚುನಾವಣೆಯ ಅವಲೋಕನ ನಡೆಸಿದ್ದಲ್ಲದೆ, ತಾ. 28 ರಂದು (ಇಂದು) ಕೊಡಗು ಬಂದ್ ಯಶಸ್ವಿಗೆ ತೀರ್ಮಾನ ಕೈಗೊಂಡಿರುವದಾಗಿ ಮೂಲಗಳು ತಿಳಿಸಿವೆ.