ಗೋಣಿಕೊಪ್ಪಲು, ಮೇ.27: ಭಾರತೀಯ ಸೇನಾ ಮಂತ್ರಾಲಯ ಕರ್ನಾಟಕ, ಕೇರಳ ಸಬ್‍ಏರಿಯಾ ವತಿಯಿಂದ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಮಾಜಿ ಸೈನಿಕರ ಬೃಹತ್ ಸಮಾವೇಶವು ಯಶಸ್ವಿಯಾಗಿ ನೆರವೇರಿತು. ಸಮಾರಂಭವನ್ನು ಉದ್ದೇಶಿಸಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್‍ಚೀಫ್ ಸದರನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಡಿ.ಆರ್.ಸೋನಿ ಮಾತನಾಡಿ, ಸಮಾವೇಶಕ್ಕೆ ಮಾಜಿ ಸೈನಿಕರು ಅಧಿಕಾರಿಗಳು ಕುಟುಂಬ ಸದಸ್ಯರು ಆಗಮಿಸಿರುವದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸೇನಾನಿಗಳಾದ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಬ್ರಿಗೇಡಿಯರ್ ಸಿ.ಬಿ. ಪೊನ್ನಪ್ಪ, ಏ.ಬಿ.ದೇವಯ್ಯ ಇಂತಹ ವೀರ ಸೇನಾನಿಯ ಮಾರ್ಗದರ್ಶನ ಕೊಡಗಿನ ಯುವಕರಿಗೆ ಸ್ಫ್ಪೂರ್ತಿ, ಮಾರ್ಗದರ್ಶಕರು ಎಂದರು.

ಸೇನೆಯು ಭಾರತದ ಪ್ರಮುಖವಾದ ಆಧಾರ ಸ್ತಂಭವಾಗಿದೆ, ಮಾಜಿ ಸೈನಿಕರ ಕಲ್ಯಾಣ, ಆರೋಗ್ಯ ಮತ್ತು ನಿರ್ವಹಣೆ ಬಹುಮುಖ್ಯ ವಾಗಿದ್ದು ಇವರ ಸಮಸ್ಯೆಗಳನ್ನು ಬಗೆಹರಿಸಲು ಮಾಜಿ ಸೈನಿಕ ಸಂಘಟನೆ ಪ್ರಯತ್ನಿಸುತ್ತಿದೆ. ನಿವೃತ್ತ ಸೈನಿಕರ ಕುಟುಂಬದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸೂಕ್ತ ಪರಿಹಾರ ನೀಡುತ್ತಾ, ಪಿಂಚಣಿ ಅರ್ಜಿ, ನಿವೇದನ ಅರ್ಜಿಗಳನ್ನು ಅಂತರ್ ಜಾಲದ ಮೂಲಕÀ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ದೇಶದಲ್ಲಿ ಇರುವ ಲಕ್ಷಾಂತರ ಮಾಜಿ ಸೈನಿಕರ ಮತ್ತು ಕುಟುಂಬ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಉತ್ತಮ ಗುಣ ಮಟ್ಟದ ವೈದ್ಯಕೀಯ ಸೌಲಭ್ಯ ವನ್ನು ಇ.ಸಿ.ಹೆಚ್.ಎಸ್ ಪಾಲಿಕ್ಲಿನಿಕ್ ಮೂಲಕ ನೀಡಲಾಗುತ್ತಿದೆ. ಸುಮಾರು ಐವತ್ತು ಲಕ್ಷಕ್ಕೂ ಮೀರಿದ ಮಾಜಿ ಸೈನಿಕರು, ಕುಟುಂಬ ಸದಸ್ಯರು ಇದರ ಪಲಾನುಭವಿಗಳಾಗಿದ್ದಾರೆ. ಈ ಯೋಜನೆಯ ಅಡಿಯಲ್ಲಿ 426 ಪಾಲಿಕ್ಲಿನಿಕ್‍ಗಳು, 28 ಪ್ರಾದೇಶಿಕ ಕೇಂದ್ರಗಳು, 1445 ಆಸ್ಪತ್ರೆಗಳಲ್ಲಿ ನಗದು ರಹಿತ ವಹಿವಾಟನ್ನು ನಡೆಸಲು ಅನುವು ಮಾಡಿಕೊಡಲಾಗಿದೆ ಎಂದರು.

ರಕ್ಷಣ ಮಂತ್ರಾಲಯದಲ್ಲಿ ಇರುವ ಸೇನಾ ಕೌಶಲ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಪ್ರಮಾಣ ಪತ್ರದೊಂದಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಶ ಯೋಜನೆ ಅಡಿಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು, ನಿವೃತ್ತಿ ನಂತರ ತಮ್ಮ ದಾಖಲೆಗಳನ್ನು ಸೈನಿಕರ ಬೋರ್ಡ್ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು, ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜನರಲ್ ಆಫೀಸರ್ ಕಮಾಂಡಿಂಗ್ ಇನ್‍ಚೀಫ್ ಸದರನ್ ಕಮಾಂಡ್ ಲೆಪ್ಟಿನೆಂಟ್ ಜನರಲ್ ಡಿ.ಆರ್.ಸೋನಿ ಯವರನ್ನು ಆರ್ಮಿ ಬ್ಯಾಂಡ್ ಮೂಲಕ ಹಿರಿಯ ಸೈನಿಕ ಅಧಿಕಾರಿಗಳು ಬರಮಾಡಿಕೊಂಡರು. ಡಿ.ಆರ್.ಸೋನಿಯವರೊಂದಿಗೆ ಇವರ ಪತ್ನಿ ಸುಮಂತ್ ಸೋನಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಸೈನಿಕ ಹಾಗೂ ಕುಟುಂಬ ಸದಸ್ಯರ ಬಳಿ ತೆರಳಿ ಮುಕ್ತವಾಗಿ ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದರು. ನೂರಾರು ಸೈನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಯ ಮುಂದೆ ಹಂಚಿ ಕೊಂಡರು. ನಂತರ ನಿವೃತ್ತ ಸೈನಿಕ ವಿಕಲಚೇತನರಿಗೆ ಮೂರುಚಕ್ರದ ವಾಹನಗಳನ್ನು ವಿತರಿಸಲಾಯಿತು. ಸೇನೆಯಲ್ಲಿ ದುಡಿದ ಹಿರಿಯ ಅಧಿಕಾರಿಗಳನ್ನು ಗೌರವಿಸಲಾಯಿತು. ಮೈದಾನದಲ್ಲಿ ಇಲಾಖೆ ವತಿಯಿಂದ ಆಧಾರ್‍ಕಾರ್ಡ್ ನೊಂದಾವಣೆ, ರಕ್ತದಾನ ಶಿಬಿರ, ಬ್ಯಾಂಕಿಂಗ್ ಸೇವೆ, ಮಾಜಿ ಸೈನಿಕರ ದಾಖಲಾತಿ ಪರಿಶೀಲನೆ, ದಂತ ಪರೀಕ್ಷೆ, ವಾಣಿಜ್ಯ ಉದ್ದೇಶ ಶಿಬಿರಗಳು ನಡೆದವು.

ಡಿ.ಆರ್.ಸೋನಿಯವರು ಪ್ರತಿ ಶಿಬಿರಗಳಿಗೆ ತೆರಳಿ ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗಿನ ನಿವೃತ್ತ ಸೈನಿಕ ಅಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಾವೇರಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪದ್ಮ ಅರುಣ್ ನಿರೂಪಿಸಿದರು. ಕಾಲೇಜು ಎನ್.ಸಿ.ಸಿ.ಘಟಕ ಭಾಗವಹಿಸಿತ್ತು. ಕಾಲೇಜಿನ ಪ್ರಿನ್ಸಿಪಾಲ್ ಪಟ್ಟಡ ಪೂವಣ್ಣ, ಕಾರ್ಯದರ್ಶಿ ಕೆ.ಜಿ.ಉತ್ತಪ್ಪ, ಹಿರಿಯ ಅಧಿಕಾರಿ ಗಳಾದ ಎಸ್.ಟಿ.ಉಪಾಸನಿ, ಮೇಜರ್ ಜನರಲ್ ಸಂಜೀವ್, ನರೈನ್ ಮುಂತಾದವರು ಉಪಸ್ಥಿತರಿದ್ದರು. ಆರ್ಮಿ ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ವಿವಿಧ ಸಾಮಗ್ರಿಗಳನ್ನು ನೀಡಲಾಯಿತು.

- ಹೆಚ್.ಕೆ.ಜಗದೀಶ್