ಗೋಣಿಕೊಪ್ಪ ವರದಿ, ಮೇ 27: ಕೊಡಗಿನಲ್ಲಿ ಮುಂಗಾರು ಆರಂಭಕ್ಕೆ ದಿನಗಣನೆ ಆರಂಭದೊಂದಿಗೆ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಉತ್ಸುಕರಾಗಿದ್ದಾರೆ. ಕೊಡಗಿನ ಪ್ರಮುಖ ಬೆಳೆಯಾದ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಬೆಳೆಯಲ್ಲಿ ಮುಂಗಾರು ಪೂರ್ವ ಕ್ರಮಗಳು ಇಳುವರಿಗೆ ಪೂರಕವಾದ ಕ್ರಮಗಳ ಕುರಿತು ಕೃಷಿಕರಲ್ಲಿ ಚರ್ಚೆ ಆರಂಭವಾಗಿದೆ.
ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ಕೃಷಿಗೆ ಪ್ರೋತ್ಸಾಹ ನೀಡಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಯೋಜನೆ ರೂಪಿಸಿಕೊಂಡಿದೆ. ಮೂರು ಬೆಳೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಲಾಗಿದೆ.
ಭತ್ತ ಕೃಷಿ
ರೋಗ ರಹಿತ ಬಿತ್ತನೆ ಬೀಜಗಳನ್ನು ಮಾತ್ರ ನಾಟಿಗೆ ಉಪಯೋಗಿಸುವದು ಉತ್ತಮ. ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಉಪಯೋಗಿಸಬೇಕು. ಪ್ರತೀ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ ಕಾರ್ಬೆಂಡೆಜಿಮ್ (ಬ್ಯಾವಿಸ್ಟೀನ್) ಅಥವಾ ಕಾರ್ಬೆಂಡೆಜಿಮ್ + ಮ್ಯಾಂಕೋಜೆಬ್ (ಸಾಫ್ 2 ಗ್ರಾಂ) ಎಂಬ ಶಿಲೀಂದ್ರ ನಾಶಕದಿಂದ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆಗೆ ಉಪಯೋಗಿಸಬೇಕು.
ಬೀಜದ ಆಯ್ಕೆ-ಬೀಜೋಪಚಾರ ಮಾಡುವ ವಿಧಾನ
ಪ್ರತೀ ಎಕರೆಗೆ ಶಿಫಾರಸ್ಸು ಮಾಡಿದ 25-30 ಕೆ.ಜಿ. ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8-12 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಬೇಕು. ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆ.ಜಿ. ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ. ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು.
ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು. ದೀರ್ಘಾವಧಿ ತಳಿಗಳ ನಾಟಿಯನ್ನು ಜುಲೈ ತಿಂಗಳ ಎರಡನೆ ವಾರದೊಳಗೆ ಕಡ್ಡಾಯವಾಗಿ ಮಾಡಲೇಬೇಕು. ದೀರ್ಘಾವಧಿ ತಳಿಗಳನ್ನು ತಡವಾಗಿ ನಾಟಿಮಾಡಿದರೆ ಬೆಂಕಿ ರೋಗದ ಭಾದೆ ತೀವ್ರವಾಗುತ್ತದೆ.
ಸಸಿಯನ್ನು ನಾಟಿ ಮಾಡುವದಕ್ಕಿಂತ ಮುಂಚಿತವಾಗಿ ಸಸಿ ಮಡಿಯ ಪೈರುಗಳ ತುದಿ ಭಾಗವನ್ನು ಕತ್ತರಿಸಿ ನಂತರ ನಾಟಿಗೆ ಉಪಯೋಗಿಸಬೇಕು. ಇದರಿಂದ ಕಾಂಡಕೊರೆಯುವ ಹುಳುವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಎಕರೆಗೆ 65 ಕೆ.ಜಿ. ಯೂರಿಯ, 150 ಕೆ.ಜಿ. ಶಿಲಾರಂಜಕ ಮತ್ತು 60 ಕೆ.ಜಿ. ಮ್ಯೂರೇಟ್ ಆಫ್ ಪೆÇಟ್ಯಾಷ್ ಮಾತ್ರ ಕೊಡಬೇಕು. ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಡಬಾರದು. ಇದರಿಂದ ಬೆಂಕಿ ರೋಗ ಬರುವ ಸಂಭವವುಂಟು. ಶಿಫಾರಸ್ಸಿನ 1/3 ಭಾಗ ಯೂರಿಯ, ಪೂರ್ತಿ ಶಿಲಾರಂಜಕ ಮತ್ತು ಅರ್ಧ ಭಾಗ ಪೆÇಟ್ಯಾಷನ್ನು ನಾಟಿ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ನಾಟಿ ಮಾಡಿದ 30 ದಿನಗಳ ಮತ್ತೊಮ್ಮೆ ಯೂರಿಯ ಹಾಗೂ ಪೆÇಟ್ಯಾಷ್ ಗೊಬ್ಬರವನ್ನು ಕೊಡಬೇಕು.
ನಾಟಿಗೆ 21 ರಿಂದ 28 ದಿನಗಳ ಸಸಿಗಳನ್ನೆ ಉಪಯೋಗಿಸಬೇಕು. ಪ್ರತೀ ಮೂರು ಬೆಳೆಗೆ ಒಂದು ಸಾರಿಯಂತೆ ಎಕರೆಗೆ 8 ಕೆ.ಜಿ. ಸತುವಿನ ಸಲ್ಫೇಟನ್ನು 25 ಕೆ.ಜಿ. ಮರಳಿನ ಜೊತೆಯಲ್ಲಿ ಮಿಶ್ರಣ ಮಾಡಿ ನಾಟಿ ಮಾಡುವ ಸಂದರ್ಭ ಮಣ್ಣಿಗೆ ಸೇರಿಸಬೇಕು ಮತ್ತು 2.0 ಕೆ.ಜಿ. ಬೋರಾಕ್ಸ್‍ನ್ನು 5 ಕೆ.ಜಿ. ಕೊಟ್ಟಿಗೆ ಗೊಬ್ಬರದ ಜೊತೆಯಲ್ಲಿ ಮಿಶ್ರಣಮಾಡಿ ನಾಟಿಗೆ ಮುನ್ನ, ಇತರೆ ರಸಗೊಬ್ಬರಗಳ ಜೊತೆ ಬೆರೆಸದಂತೆ ಪ್ರತ್ಯೇಕವಾಗಿ ಮಣ್ಣಿಗೆ ಸೇರಿಸಿ. ಇದರಿಂದ ಭತ್ತದಲ್ಲಿ ಜಳ್ಳಿನ ಪ್ರಮಾಣ ಕಡಿಮೆಯಾಗುತ್ತದೆ.
ಕಾಳುಮೆಣಸು ಕೃಷಿ
ಚಿಬ್ಬು ರೋಗವನ್ನು ಹತೋಟಿ ಮಾಡಲು 1 ಗ್ರಾಂ. ಕಾರ್ಬೆಂಡೆಜಿಮ್‍ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವದು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟ ದಿಂದ ಹೊರಗೊಯ್ದು ನಾಶಪಡಿಸಬೇಕು. ಪ್ರತೀ ಬಳ್ಳಿಗೆ 50 ರಿಂದ 60 ಗ್ರಾಂ. ಟ್ರೈಕೋಡರ್ಮ ಎಂಬ ಜೈವಿಕ ಶಿಲೀಂದ್ರವನ್ನು 1 ಕೆ.ಜಿ. ಬೇವಿನ ಹಿಂಡಿ ಅಥವಾ 5 ಕೆ.ಜಿ. ಕೊಟ್ಟಿಗೆ ಗೊಬ್ಬರದಲ್ಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು ಅಥವಾ 4 ಕೆ.ಜಿ. ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಅರ್ಧ ಕೆ.ಜಿ. ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್‍ನಷ್ಟು) ಸುರಿಯಬೇಕು. ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿಯ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.
ಮುನ್ನೆಚ್ಚರಿಕೆಯಾಗಿ ಮುಂಗಾರಿಗೆ ಮುನ್ನ ಬಳ್ಳಿ, ಎಲೆ ಮತ್ತು ಕಾಂಡ ಪೂರ್ಣ ತೊಯ್ಯುವಂತೆ ಶೇ. 1 ರ ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡಬೇಕು. ಟ್ರೈಕೋಡರ್ಮ ಅಥವಾ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಹಾಕದಿದ್ದರೆ ಪ್ರತಿ ಬಳ್ಳಿಗೆ 3 ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರಲ್‍ಗೆ 500 ಗ್ರಾಂ) ದ್ರಾವಣದಿಂದ ಬಳ್ಳಿಯ ಬುಡದ ಭಾಗವನ್ನು ನೆನೆಸಬೇಕು ಮತ್ತು ಶೇ. 1 ರ ಬೋರ್ಡೊ ದ್ರಾವಣ ಅಥವಾ 3.0 ಮಿ.ಲಿ. ಪೊಟ್ಯಾಸಿಯಂ ಪಾಸ್ಪೋನೇಟ್‍ನ್ನು ಪ್ರತಿ ಲೀಟರ್ ನೀರಿಗೆ ಬೆರಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು.
ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಗಿಡಕ್ಕೆ 300 ಗ್ರಾಂ ಯೂರಿಯಾ, 275 ಗ್ರಾಂ ಶಿಲಾರಂಜಕ ಮತ್ತು 450 ಗ್ರಾಂ ಎಂ.ಓ.ಪಿನ್ನು ಕೊಡಬೇಕು.ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಬಳ್ಳಿಗೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.
ನೆಲದ ಮೇಲೆ ಹರಡಿರುವ ಹಾಗೂ ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿಗೆ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆ ಕಟ್ಟಿ ಬೆಳೆಯಲು ಬೀಡÀಬೇಕು.ಕತ್ತರಿಸಿದ ಭಾಗಕ್ಕೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟನಿಂದ ಲೇಪನ ಮಾಡಬೇಕು.
ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಒಂದಕ್ಕಿಂತ ಹೆಚ್ಚು ತಳಿಗಳಿರುವಂತೆ ಕಾಳುಮೆಣಸು ಬಳ್ಳಿಗಳನ್ನು ನಾಟಿ ಮಾಡಬೇಕು. ಬಳ್ಳಿಯ ಗಾತ್ರ ಹೆಚ್ಚಿಸಲು 5-8 ಬಳ್ಳಿಗಳನ್ನು ನಾಟಿಮಾಡಬೇಕು. ಜಂತುಹುಳುಗಳ ಬಾಧೆಯನ್ನು ತಪ್ಪಿಸಲು (ನಿಧಾನ ಸೊರಗು ರೋಗ) ಮಳೆಗಾಲ ಪ್ರಾರಂಭವಾಗುವದಕ್ಕಿಂತ ಮುಂಚೆ ಪ್ರತೀ ಬಳ್ಳಿಗೆ 1 ಕಿ.ಗ್ರಾಂ. ಬೇವಿನ ಹಿಂಡಿ ಮತ್ತು 10 ಗ್ರಾಂ. ಪೆÇೀರೆಟ್ ಹರಳುಗಳನ್ನು ಗಿಡದ ಬುಡಕ್ಕೆ ಹಾಕಬೇಕು.
ಅಡಿಕೆ ಕೃಷಿ
ಮಳೆಗಾಲ ಪ್ರಾರಂಭವಾಗುವದಕ್ಕಿಂತ ಮುಂಚಿತವಾಗಿ ತೋಟದಲ್ಲಿರುವ ರೋಗ ಪೀಡಿತ ಗೊಂಚಲು ಮತ್ತು ಅಡಿಕೆ ಕಾಯಿಗಳನ್ನು ಆರಿಸಿ ತೆಗೆದು ನಾಶಗೊಳಿಸಬೇಕು. ಕೊಳೆ ರೋಗವನ್ನು ಹತೋಟಿ ಮಾಡಲು ರೈತರು ಶೇ. 1 ರ ಬೋರ್ಡೊ ದ್ರಾವಣವನ್ನು ಸರಿಯಾಗಿ ತಯಾರಿಸಿ ಮೊದಲನೆ ಸಿಂಪರಣೆಯನ್ನು ಜೂನ್ ತಿಂಗಳ ಮೊದಲನೆ ವಾರದೊಳಗೆ ಕಡ್ಡಾಯವಾಗಿ ಸಿಂಪರಣೆ ಮಾಡಲೇಬೇಕು. ಬೋರ್ಡೊ ದ್ರಾವಣ ವನ್ನು ಸಿಂಪರಣೆ ಮಾಡುವದಕ್ಕಿಂತ ಮೊದಲು ಕಡ್ಡಾಯ ವಾಗಿ ದ್ರಾವಣದ ರಸಸಾರವನ್ನು ಪರೀಕ್ಷಿಸಿ ನಂತರ ಸಿಂಪರಣೆಗೆ ಉಪಯೋಗಿಸಬೇಕು. ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಅಡಿಕೆ ಕಾಯಿ ಹೊಡೆದು ಬೀಳುವ /ಸೀಳುವ ಸಮಸ್ಯೆ ಇದ್ದಲ್ಲಿ ಪ್ರತಿ ಅಡಿಕೆ ಗಿಡಕ್ಕೆ 25 ರಿಂದ 30 ಗ್ರಾಂ. ಬೋರಾಕ್ಸ್‍ನ್ನು ಕೊಡಬೇಕು. ಪ್ರತಿ ಮರವೊಂದಕ್ಕೆ ವರ್ಷಕ್ಕೆ 20 ಕಿ.ಗ್ರಾಂ.ನಂತೆ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಕೊಡಬೇಕು.
ಪ್ರತಿ ಗಿಡಕ್ಕೆ 220 ಗ್ರಾಂ. ಯೂರಿಯಾ, 200 ಗ್ರಾಂ. ಶಿಲಾರಂಜಕ ಮತ್ತು 230 ಗ್ರಾಂ ಎಂ.ಓ.ಪಿನ್ನು ಕೊಡಬೇಕು. ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಗಿಡಕ್ಕೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.
ಬೇರು ಹುಳುವಿನ ಬಾಧೆಯಿರುವ ಪ್ರದೇಶದಲ್ಲಿ ರೈತರು ಇದರ ಹತೋಟಿ ಕ್ರಮಗಳನ್ನು ಅನುಸರಿಸಲು ಇದು ಸೂಕ್ತ ಸಮಯವಾಗಿರುವದರಿಂದ ಮೇ ಅಥವಾ ಜೂನ್ ತಿಂಗಳ ಒಳಗೆ ಅಡಿಕೆ ಮರದ ಸುತ್ತಲೂ ಹಗುರವಾಗಿ ಅಗೆತ ಮಾಡಿ ಪ್ರತೀ ಮರಕ್ಕೆ 20 ಗ್ರಾಂ. ಪೆÇೀರೆಟ್ ಹರಳನ್ನು ಹಾಕಿ ಮಣ್ಣಿನಿಂದ ಮುಚ್ಚಬೇಕು ಅಥವಾ ಕ್ಲೋರೋಪೈರಿಫಾಸ್ 20 ಇ.ಸಿ. (5 ಮಿ.ಲೀ.) ಅಥವಾ ಇಮಿಡಾಕ್ಲೋಪ್ರಿಡ್ 200 ಎಸ್. ಎಲ್ (0.5 ಮಿ.ಲೀ.) ಎಂಬ ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಮಿಶ್ರಣ ಮಾಡಿ ಪ್ರತಿಯೊಂದು ಮರಕ್ಕೆ ಸುಮಾರು 2 ರಿಂದ 3 ಲೀಟರ್ ದ್ರಾವಣವನ್ನು ಮರದ ಬುಡದ ಸುತ್ತಲೂ ಸುರಿಯಬೇಕು. ಕಡ್ಡಾಯವಾಗಿ ಕೃಷಿಕರು ಮುಂಗಾರು ಪೂರ್ವ ಕೃಷಿ ಪದ್ದತಿಯನ್ನು ಪಾಲಿಸಬೇಕಿದೆ. ರೋಗರಹಿತ ಕೃಷಿಯಿಂದ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಕೃಷಿಕರು ಕಾರ್ಯನಿರ್ವಹಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ತಿಳಿಸಿದ್ದಾರೆ.