ಸೋಮವಾರಪೇಟೆ, ಮೇ 27: ಲೋಕೋ ಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳ ವಾರ್ಷಿಕ ನಿರ್ವಹಣೆ ಮಾಡದೇ ಗುತ್ತಿಗೆದಾ ರರೊಂದಿಗೆ ಕೈ ಜೋಡಿಸಿ ಅಭಿಯಂ ತರರು ಹಣ ಗುಳುಂ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆದ ಬೆನ್ನಲ್ಲೇ ಇದೀಗ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಕಳೆದ ತಾ. 21 ರಂದು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ಸೇರಿದಂತೆ ಇತರರು ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಭಿಯಂತರರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಲಕ್ಷಾಂತರ ಹಣ ಬಿಡುಗಡೆಯಾಗುತ್ತಿದ್ದು, ಪ್ರತಿ ವರ್ಷ ಕಾಮಗಾರಿ ಮಾಡಲಾಗಿದೆ ಎಂದು ಸುಳ್ಳು ಲೆಕ್ಕ ತೋರಿಸಿ ಇಂಜಿನಿಯರ್‍ಗಳು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿರಿಯ ಅಭಿಯಂತರರ ವಿರುದ್ಧ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕುಮಾರ್ ಅವರಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ಬಗ್ಗೆ ಕಿರಿಯ ಅಭಿಯಂತರರು ಆಗಿರುವ ಲೋಪದೋಷವನ್ನು ಒಪ್ಪಿಕೊಂಡು ಮುಂದಿನ 15 ದಿನಗಳ ಒಳಗೆ ರಸ್ತೆ ಬದಿ ಚರಂಡಿ, ಕಾಡು ಕಡಿಯುವ ಕಾಮಗಾರಿ ಕೈಗೊಳ್ಳುವದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.

ಪ್ರತಿಭಟನೆ ನಡೆದು ಮೂರೇ ದಿನದಲ್ಲಿ ರಸ್ತೆಯ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದು, ತಲ್ತರೆಶೆಟ್ಟಳ್ಳಿ-ತಾಕೇರಿ-ಗರ್ವಾಲೆ ರಸ್ತೆಯಲ್ಲಿ ಕೆಲಸ ಪ್ರಗತಿಯಲ್ಲಿದೆ.

ಮಳೆಗಾಲ ಪ್ರಾರಂಭವಾಗುವದರ ಒಳಗಾಗಿ ಎಲ್ಲಾ ರಸ್ತೆಗಳ ಬದಿ ಚರಂಡಿ ಮತ್ತು ಕಾಡು ಕಡಿಯುವ ಕೆಲಸ ಪೂರ್ಣಗೊಳಿಸಬೇಕು. ಈ ಕಾಮಗಾರಿಗಾಗಿ ಈಗಾಗಲೇ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಕಾಮಗಾರಿ ಮಾಡದಿದ್ದಲ್ಲಿ ಕಾನೂನು ಹೋರಾಟ ಕೈಗೊಳ್ಳಲಾಗುವದು ಎಂದು ಮಾಹಿತಿ ಹಕ್ಕು ಕಾರ್ಯಕರ್ತರಾದ ಬಗ್ಗನ ಅನಿಲ್, ಬಗ್ಗನ ಹರೀಶ್ ಅವರುಗಳು ‘ಶಕ್ತಿ’ ಮೂಲಕ ಎಚ್ಚರಿಸಿದ್ದಾರೆ.