ಮಡಿಕೇರಿ, ಮೇ 27: ರೈತರ ಸಾಲಮನ್ನಾಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಆಗ್ರಹಿಸುವದರೊಂದಿಗೆ, ಕರ್ನಾಟಕ ಬಂದ್ ಕರೆ ಹಿನ್ನೆಲೆ ತಾ. 28 ರಂದು (ಇಂದು) ಜಿಲ್ಲಾ ಬಿಜೆಪಿ ನಾಯಕರು ನೀಡಿರುವ ಕೊಡಗು ಬಂದ್ ಸಲುವಾಗಿ ಜಿಲ್ಲಾ ಆಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಂಡಿರುವದಾಗಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಯಾರಿಗೂ ತೊಂದರೆ ಆಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರಿಗೆ ತುರ್ತು ಸೇವೆ, ಔಷಧಿಗಳು, ಹಾಲು ಇತ್ಯಾದಿ ಒದಗಿಸಲು ಮತ್ತು ಬಲವಂತವಾಗಿ ಬಂದ್‍ಗೆ ಅಡ್ಡಿಪಡಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವದು ಎಂದು ಶ್ರೀ ವಿದ್ಯಾ ಸ್ಪಷ್ಟಪಡಿಸಿದ್ದು, ಕಾನೂನು ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಯು ಗಮನ ಹರಿಸಲಿದೆ ಎಂದರು.

ಎಸ್‍ಪಿ ಪ್ರತಿಕ್ರಿಯೆ: ಕೊಡಗು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಮೂಲಕ ಶಾಂತಿ ಪಾಲನೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದ್ದು, ಯಾವದೇ ಒತ್ತಡ, ಬೆದರಿಕೆ, ಕಾನೂನು ಕೈಗೆತ್ತಿಕೊಳ್ಳುವದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವದು ಎಂದು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ‘ಶಕ್ತಿ’ಯೊಂದಿಗೆ ಸುಳಿವು ನೀಡಿದರು.

(ಮೊದಲ ಪುಟದಿಂದ) ಅಲ್ಲದೆ ಜಿಲ್ಲೆಯ ಜನತೆ ಕಾನೂನು ಸುವ್ಯವಸ್ಥೆಯೊಂದಿಗೆ, ಶಾಂತಿ ಪಾಲನೆಗೆ ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸುವ ಮೂಲಕ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸಲಹೆ ನೀಡಿದರು.

ಬಸ್ ಮಾಲೀಕರ ಸಂಘ: ಕೊಡಗು ಬಂದ್ ವೇಳೆ ಖಾಸಗಿ ಬಸ್‍ಗಳ ಸುರಕ್ಷತೆ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸುವದಾಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಬದಲಾಗಿ ಡೀಸೆಲ್ ಬೆಲೆ ಏರಿಕೆ ಹಾಗೂ ಬಸ್ ಬಿಡಿಭಾಗಗಳ ದರ ಸರಿದೂಗಿಸಲು ಈಗಿನ ವ್ಯವಸ್ಥೆ ಯಲ್ಲಿ ತೊಂದರೆ ಅನುಭವಿಸುತ್ತಿದ್ದು, ಬಂದ್ ವೇಳೆ ಬಸ್‍ಗಳಿಗೆ ಹಾನಿ ತಪ್ಪಿಸಲು ಸಂಚಾರ ಸ್ಥಗಿತಗೊಳಿ ಸುವದಾಗಿ ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ರೈತರ ಮಕ್ಕಳು : ಆಟೋ ಚಾಲಕರ - ಮಾಲೀಕರ ಸಂಘದ ಅಧ್ಯಕ್ಷ ಡಿ.ಎಚ್. ಮೇದಪ್ಪ ಪ್ರತಿಕ್ರಿಯಿಸಿ, ರೈತರೂ ಸೇರಿದಂತೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಅಧಿಕಾರ ಹಿಡಿದ 24 ಗಂಟೆಗಳಲ್ಲಿ ಮನ್ನಾ ಮಾಡುವದಾಗಿ ತಿಳಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತು ತಪ್ಪಿರುವ ಕಾರಣ ಬಂದ್‍ಗೆ ಬೆಂಬಲ ಘೋಷಿಸಿರುವದಾಗಿ ತಿಳಿಸಿದರು. ಅಲ್ಲದೆ ದುಡಿಯುವ ವರ್ಗದ ಎಲ್ಲರೂ ಕೂಡ ರೈತರ ಮಕ್ಕಳೇ ಆಗಿದ್ದಾರೆ ಎಂಬ ಅರಿವು ಮುಖ್ಯಮಂತ್ರಿಗಳಿಗೆ ಇರಬೇಕೆಂದು ನೆನಪಿಸಲು ಈ ಬಂದ್ ಯಶಸ್ವಿಗೊಳಿಸಲು ತಾನು ಎಲ್ಲರಲ್ಲಿ ಕೋರುವದಾಗಿ ಮಾರ್ನುಡಿದರು.

ಬಂದ್ ಹಿನ್ನೆಲೆ ಸಭೆ

ಕೊಡಗು ಬಂದ್ ಹಿನ್ನೆಲೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಷಣ್ಮುಗಪ್ಪ ಅವರು, ಬಿಜೆಪಿ ಹಾಗೂ ಚೇಂಬರ್ ಆಫ್ ಕಾಮರ್ಸ್ ಪ್ರಮುಖರೊಡನೆ ಸಮಾಲೋಚನೆ ಸಭೆ ನಡೆಸುವ ಮೂಲಕ, ಕಾನೂನು ಪಾಲನೆಯಡಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಲಹೆ ನೀಡಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮದ ಸುಳಿವು ನೀಡಿದ್ದಾರೆ. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಮೋಂತಿ ಗಣೇಶ್, ಇಂದಿನ ಬಂದ್‍ನಲ್ಲಿ ಸ್ವಯಂ ಪಾಲ್ಗೊಳ್ಳುವ ಅವಕಾಶ ವರ್ತಕರಿಗೆ ಇದ್ದು, ತಾನು ಸಹಕಾರ ಕೋರುವದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.