ಗೋಣಿಕೊಪ್ಪ ವರದಿ, ಮೇ 27 : ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಕೊಡಗು ಬಲಿಜ ಸಮಾಜದ ವತಿಯಿಂದ ನಡೆದ ಪ್ರಥಮ ವರ್ಷದ ಕೊಡಗು ಬಲಿಜ ಕ್ರೀಡೋತ್ಸವದ ಕ್ರಿಕೆಟ್‍ನಲ್ಲಿ ಸಿ. ಬಿ. ಟಸ್ಕರ್ಸ್ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್ ಎತ್ತಿ ಹಿಡಿಯಿತು. ಫೈನಲ್‍ನಲ್ಲಿ ಸೋಲನುಭವಿಸಿದ ತಿತಿಮತಿ ಬ್ಲೂಬಾಯ್ಸ್ (ಮೊದಲ ಪುಟದಿಂದ) ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಳೆಯ ಕಾರಣ ಬಾಲೌಟ್ ನಿಯಮದ ಮೂಲಕ ವಿಜೇತರನ್ನು ಘೋಷಿಸಲಾಯಿತು. ಸಿ. ಬಿ. ಟಸ್ಕರ್ಸ್ ತಂಡವು ಬಾಲೌಟ್‍ನಲ್ಲಿ ತಿತಿಮತಿ ಬ್ಲೂಬಾಯ್ಸ್ ತಂಡವನ್ನು ಮಣಿಸಿ ಕಪ್ ಗೆದ್ದುಕೊಂಡಿತು. ಸೆಮಿಫೈನಲ್‍ನಲ್ಲಿ ಸಿ. ಬಿ. ಟಸ್ಕರ್ ತಂಡವು ಅಗಸ್ತ್ಯ ತಂಡವನ್ನು 33 ರನ್‍ಗಳಿಂದ ಸೋಲಿಸಿತು. ಸಿ.ಬಿ ತಂಡವು 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತು. ಅಗಸ್ತ್ಯ ತಂಡವು 2 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿತು.

2 ನೇ ಸೆಮಿಯಲ್ಲಿ ತಿತಿಮತಿ ಬ್ಲೂಬಾಯ್ಸ್ ತಂಡವು ಶಿರಂಗಾಲ ಎ. ತಂಡವನ್ನು ಬಾಲೌಟ್‍ನಲ್ಲಿ ಸೋಲಿಸಿ ಫೈನಲ್‍ಗೆ ಪ್ರವೇಶ ಪಡೆಯಿತು. ಕ್ರಿಕೆಟ್ ಟೂರ್ನಿಯಲ್ಲಿ ಶಿಸ್ತಿನ ಆಟವಾಡುವ ಮೂಲಕ ಕೂರ್ಗ್‍ನಾಯ್ಡು ಬಾಯ್ಸ್ ಶಿಸ್ತುಬದ್ಧ ತಂಡ ಪ್ರಶಸ್ತಿ ಪಡೆದುಕೊಂಡಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಿ. ಬಿ.ಟಸ್ಕರ್ಸ್ ತಂಡದ ಕಿರಣ್ ಪಡೆದುಕೊಂಡರು. ಟೂರ್ನಿಯಲ್ಲಿ 83 ರನ್ ಗಳಿಸಿ 4 ವಿಕೆಟ್ ಪಡೆಯುವ ಮೂಲಕ ಇವರು ಈ ಸಾಧನೆ ಮಾಡಿದರು. ಪಂದ್ಯ ಪುರುಷರಾಗಿ ಸಿ. ಬಿ. ಟಸ್ಕರ್ಸ್‍ನ ದೀಪಕ್, ಉತ್ತಮ ಬೌಲರ್ ಪ್ರಶಸ್ತಿಯನ್ನು ತಿತಿಮತಿ ತಂಡದ ಬಾಲು 9ವಿಕೆಟ್ ಪಡೆಯುವ ಮೂಲಕ ಪಡೆದುಕೊಂಡರು.

ಹಗ್ಗಜಗ್ಗಾಟ: ಮಹಿಳೆಯರಿಗೆ ನಡೆದ ಹಗ್ಗಜಗ್ಗಾಟದಲ್ಲಿ ಮೂರ್ನಾಡು ತಂಡ ಪ್ರಥಮ, ಗೋಣಿಕೊಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರಲ್ಲಿ ಶಿರಂಗಾಲ ಎ. ಪ್ರಥಮ, ಟಸ್ಕರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ಸಂಗೀತ ಕುರ್ಚಿಯಲ್ಲಿ ಗೋಣಿಕೊಪ್ಪದ ಜಯಶ್ರೀ ಪ್ರಥಮ, ಬೆಕ್ಕೆಸೊಡ್ಲೂರುವಿನ ಶೀತಲ್ ನಾಯ್ಡು ದ್ವಿತೀಯ, ಬಲಮುರಿಯ ನಿರ್ಮಲ ತೃತೀಯ ಸ್ಥಾನ ಪಡೆದರು. ತೀರ್ಪುಗಾರರಾಗಿ ತಿಮ್ಮಯ್ಯ, ಅಭಿಷೇಕ್, ಅಲೋಕ್, ವಿವೇಕ್, ಚಿದಾನಂದ್ ಕಾರ್ಯನಿರ್ವಹಿಸಿ ದರು. ಮಡಿವಾಳರ ವಿನೋದ್ ವೀಕ್ಷಕ ವಿವರಣೆ ನೀಡಿದರು.

ಸಮಾರೋಪದಲ್ಲಿ ಕೊಡಗು ಬಲಿಜ ಸಮಾಜ ಅಧ್ಯಕ್ಷ ತೆಲುಗರ ಲಕ್ಷ್ಮಣ್ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಜಿ. ಬೋಪಯ್ಯ, ಬಲಿಜ ಸಮಾಜದ ಪ್ರಮುಖರುಗಳಾದ ಗಣೇಶ್ ನಾಯ್ಡು, ವೀರೇಂದ್ರಕುಮಾರ್, ರಾಜಶೇಖರ್, ಶ್ರೀನಿವಾಸ್, ಟ್ರೋಫಿ ದಾನಿ ಟಿ. ವೇಣುಗೋಪಾಲ್ ಪಾಲ್ಗೊಂಡಿದ್ದರು. ಬಲಿಜ ಮುಖಂಡ ಗೋವಿಂದಪ್ಪ ಮಾತನಾಡಿ, ಬಡವರ್ಗದ ಸಂಖ್ಯೆ ನಮ್ಮಲ್ಲಿ ಹೆಚ್ಚಿದ್ದರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಉನ್ನತ ಸ್ಥಾನಮಾನ ಗಳಿಸಲು ಅವಕಾಶ ಮಾಡಿಕೊಡಬೇಕು ಎಂದರು. ರಾಜಕೀಯವಾಗಿ ಬಲಿಜರು ಹಿಂದೆ ಇದ್ದೇವೆ. ರಾಜಕೀಯ ಸ್ಥಾನಮಾನ ಪಡೆಯಲು ಯೋಜನೆ ರೂಪಿಸಿ ಕೊಳ್ಳುವ ಅವಶ್ಯಕತೆ ಇದೆ ಎಂದರು.

ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿನಾಯ್ಡು, ತಾಲೂಕು ಬಲಿಜ ಸಮಾಜ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷ ಎಸ್. ಕೆ. ಯತಿರಾಜ್‍ನಾಯ್ಡು, ಪ್ರ. ಕಾರ್ಯದರ್ಶಿ ಗೀತಾ ನಾಯ್ಡು, ಗೌ. ಕಾರ್ಯದರ್ಶಿ ಗಣೇಶ್, ಖಜಾಂಜಿ ಟಿ.ಎನ್.ಲೋಕನಾಥ್, ಬಲಿಜ ಬಿಂಬ ಸಂಪಾದಕ ಎನ್.ಸಂಜೀವಪ್ಪ, ಮಾರತ್‍ಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

-ವರದಿ : ಸುದ್ದಿಪುತ್ರ