ಮಡಿಕೇರಿ, ಮೇ. 27: ಎಲ್ಲಿಂದಲೋ ಹೊರಟು, ಇನ್ನೆಲ್ಲಿಗೋ ಪ್ರಯಾಣಿಸುವಾಗ ಅಥವಾ ತಿಳಿಯದ ಊರಿನಲ್ಲಿ ಯಾರಾದರೂ ಕಷ್ಟಕಾಲದಲ್ಲಿ ನೆರವಿಗೆ ಬಂದರೆ, ಆತನನ್ನು ದೇವರೇ ಕಳುಹಿಸಿಕೊಟ್ಟ... ಎಂದು ಉದ್ಗರಿಸು ತ್ತೇವೆ. ಬಹುಶಃ ನಮ್ಮ ಹಿರಿಯರು ಕೂಡ ‘ಆಪತ್ತಿಗೆ ಆಗುವವನೇ ನೆಂಟ’ ಎಂದಿದ್ದಾರೆ.
ಬಾಡಿಗೆ ಕಾರು ಚಾಲಕನೊಬ್ಬ ಪ್ರಯಾಣಿಕರನ್ನು ದೂರದ ಬೆಂಗಳೂರಿನಿಂದ ಕರೆದುಕೊಂಡು ಕೊಡಗಿಗೆ ಬಂದು, ಆಪತ್ತಿನಲ್ಲಿ ಸಿಲುಕುವದರೊಂದಿಗೆ, ಪೊಲೀಸ್ ಉದ್ಯೋಗಿಯೊಬ್ಬರ ನೆರವಿನಿಂದ ಮರಳಿ ಮನೆ ಸೇರಿಕೊಂಡ ಪ್ರಸಂಗವದು.
ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸಿ ರೇಣುಕಾ ಎಂಬವರ ಪುತ್ರಿಯ ಸೀಮಂತ ಕಾರ್ಯ ಇಂದು ನಡೆಯುತ್ತಿತ್ತು. ಈ ನಡುವೆ ನಿನ್ನೆ ರೇಣುಕಾ ಅವರ ಪುತ್ರ ಪ್ರೀತಂಗೆ ಯಾರೋ ಕರೆ ಮಾಡಿ, ತುರ್ತಾಗಿ ಬಾಡಿಗೆ ಕಾರಿನಲ್ಲಿ ಮೈಸೂರಿಗೆ ಹೋಗಿ ಬರುವಂತೆ ತಿಳಿಸಿದರೆನ್ನಲಾಗಿದೆ.
ಆತ ತನ್ನ ಅಕ್ಕಾಳಿಗೆ ಏರ್ಪಡಿಸಿದ್ದ ಸೀಮಂತ ಕಾರ್ಯ ಬಿಟ್ಟು ತುರ್ತು ಹೋಗಿ ಬೇಗ ಬರುವದಾಗಿ ಅಮ್ಮನನ್ನು ಒಪ್ಪಿಸಿ ಹೊರಟ್ಟಿದ್ದನಂತೆ. ನಿನ್ನೆ ಹಾಗೂ ಇಂದು ಮಧ್ಯಾಹ್ನ ತನಕ ಆತ ಮೊಬೈಲ್ ಸಂಪರ್ಕ ಕಡಿದು ಕೊಂಡಿದ್ದನಂತೆ. ಇತ್ತ ಇಂದು ಗೋಣಿಕೊಪ್ಪಲುವಿನಲ್ಲಿ ಆಯೋಜಿ ಸಿದ್ದ ಮಾಜಿ ಸೈನಿಕರ ಸಮಾವೇಶಕ್ಕೆ ಆಗಮಿಸಿರುವ ಸೈನ್ಯಾಧಿಕಾರಿಗಳನ್ನು ಪಾಲಿಬೆಟ್ಟ ‘ಹೆಲಿಪ್ಯಾಡ್’ನಲ್ಲಿ ಇಳಿಸಿಕೊಳ್ಳಲು ಜಿಲ್ಲೆಯ ವರಿಷ್ಠಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ಶಸಸ್ತ್ರ ಮೀಸಲು ಪಡೆಯ ‘ವಜ್ರ’ ವಾಹನ ರಕ್ಷಣೆಗೆ ತೆರಳಿತ್ತು.
ಮಧ್ಯಾಹ್ನ ಈ ವಾಹನ ವಾಪಾಸಾಗುತ್ತಿದ್ದ ವೇಳೆ ಚೆಟ್ಟಳ್ಳಿ-ಕಡಗದಾಳು ನಡುವೆ ತೀರಾ ಬಳಲಿದ ಸ್ಥಿತಿಯಲ್ಲಿ ಬೆಂಗಳೂರಿನ ಪ್ರೀತಂ ಕಾಣಿಸಿಕೊಂಡಿದ್ದಾನೆ. ಕೂಡಲೇ ಪೊಲೀಸ್ ವಾಹನದಲ್ಲಿದ್ದ ಎಎಸ್‍ಐ ವೆಂಕಪ್ಪ ಕೆಳಗಿಳಿದು ಈತನ ಬಗ್ಗೆ ವಿಚಾರಿಸಿದ್ದಾರೆ. ಆಗ ತಿಳಿದು ಬಂದ ಮಾಹಿತಿ ಪ್ರಕಾರ ಪ್ರೀತಂಗೆ ಮೂರ್ಚೆ ರೋಗವಿದ್ದು, ಆತ ಪ್ರಯಾಣಿಕರನ್ನು ಬಾಡಿಗೆ ಕಾರಿನಲ್ಲಿ ಕರೆ ತರುವಾಗ ಮಾತ್ರೆ ಹಾಗೂ ಸರಿಯಾಗಿ ಆಹಾರ ತೆಗೆದುಕೊಳ್ಳದೆ ಬಳಲಿದ್ದಾನೆ. ಈ ಪ್ರಸಂಗದಿಂದ ಕೆರಳಿರುವ ಪ್ರಯಾಣಿಕರು ಕಾರು ಮಾಲೀಕನಿಗೆ ವಿಷಯ ತಿಳಿಸಿ, ಪ್ರೀತಂನನ್ನು ಮಾರ್ಗಮಧ್ಯೆ ಇಳಿಸಿ ಬಿಡುವದ ರೊಂದಿಗೆ ಬದಲಿ ವ್ಯವಸ್ಥೆಯೊಂದಿಗೆ ತೆರಳಿಬಿಟ್ಟಿದ್ದಾರೆ?
ಪರಿಣಾಮ ಬೀದಿ ಪಾಲಾಗಿದ್ದ ಆತನನ್ನು ‘ವಜ್ರ’ ವಾಹನದಲ್ಲಿದ್ದ ವೆಂಕಪ್ಪ ಮಡಿಕೇರಿಗೆ ಕರೆ ತಂದು ಔಷಧಿ, ಆಹಾರ, ನೀರು ಕೊಟ್ಟು ಉಪಚರಿಸಿ ರೂ. 500 ಕೈಗಿತ್ತು ಬೆಂಗಳೂರು ಮನೆ ಸೇರಿಕೊಳ್ಳುವಂತೆ ಕಳುಹಿಸಿಕೊಟ್ಟಿದ್ದಾರೆ. ಪ್ರೀತಂನಿಂದ ವಿಷಯ ತಿಳಿದ ತಾಯಿ ರೇಣುಕಾ ಮನೆಯಲ್ಲಿ ಶುಭ ಕಾರ್ಯ ಬಿಟ್ಟು ತೆರಳಿದ ಮಗನಿಗೆ ದೇವರು ದಂಡನೆ ನೀಡಿದ್ದು, ಪೊಲೀಸ್ ಅಧಿಕಾರಿ ವೆಂಕಪ್ಪ ರೀತಿಯಲ್ಲಿ ಆ ದೇವರೇ ಸಹಾಯ ಮಾಡಿದ್ದಾಗಿ ಉದ್ಗರಿಸಿದ್ದಾರೆ.